ಕೈರೋ:ಅಂತರ್ಯುದ್ಧದಿಂದ ನರಳುತ್ತಿರುವ ಸುಡಾನ್ ಈಗ ಪ್ರಕೃತಿ ವಿಕೋಪಕ್ಕೆ ತುತ್ತಾಗಿದೆ. ಇಲ್ಲಿನ ಮಳೆಯಿಂದಾಗಿ ಕೆಂಪು ಸಮುದ್ರದ ಬಳಿ ಇರುವ ಅರ್ಬತ್ ಅಣೆಕಟ್ಟು ಕುಸಿದಿದೆ. ಇದರಿಂದ ಸಾವಿರಾರು ಮನೆಗಳು ನಾಶವಾಗಿವೆ. ಕನಿಷ್ಠ 60 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಸುಡಾನ್‌ನ ಪೂರ್ವ ಕೆಂಪು ಸಮುದ್ರ ರಾಜ್ಯದಲ್ಲಿ ಅಣೆಕಟ್ಟು ಕುಸಿದಿದ್ದು, ಸಮೀಪದ ಮನೆಗಳಿಗೆ ನೀರು ನುಗ್ಗಿದೆ ಎಂದು ದೇಶದ ಆರೋಗ್ಯ ಸಚಿವಾಲಯ ತಿಳಿಸಿದೆ. ನೂರಾರು ಮಂದಿ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಭಾನುವಾರ ತಡರಾತ್ರಿ ಹೇಳಿಕೆಯಲ್ಲಿ, ಅರ್ಬಾತ್ ಅಣೆಕಟ್ಟು ಕುಸಿದಿದೆ ಮತ್ತು ಸಿಲುಕಿರುವ ಜನರಿಗೆ ಸಹಾಯ ಮಾಡಲು ರಕ್ಷಾಣ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಪ್ರವಾಹದಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ. ಆದರೆ ಎಷ್ಟು ಮಂದಿ ನಾಪತ್ತೆಯಾಗಿದ್ದಾರೆ ಎಂಬದು ತಿಳಿದುಬರಬೇಕಿದೆ ಎಂದು ಸಚಿವಾಲಯ ತಿಳಿಸಿದೆ.
ಈ ದುರ್ಘಟನೆಯಲ್ಲಿ ಕನಿಷ್ಠ 60 ಮಂದಿ ಸತ್ತಿದ್ದಾರೆ ಎಂದು ಶಂಕಿಸಲಾಗಿದೆ ಎಂದ ಸ್ಥಳೀಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅರ್ಬತ್ ಅಣೆಕಟ್ಟು ಕುಸಿದಿರುವುದರಿಂದ ಹಲವು ಪ್ರದೇಶಗಳು ಜಲಾವೃತವಾಗಿವೆ. ಕೆಂಪು ಸಮುದ್ರದ ಸಮೀಪದಲ್ಲಿರುವ ಪೋರ್ಟ್ ಸುಡಾನ್ ನಗರಕ್ಕೆ ಈ ಅಣೆಕಟ್ಟು ಕುಡಿಯುವ ನೀರಿನ ಮೂಲವಾಗಿದೆ ಎಂದು ಹೇಳಲಾಗುತ್ತಿದೆ. ಪ್ರವಾಹದಿಂದಾಗಿ ಹಲವು ಪ್ರದೇಶಗಳಲ್ಲಿ ಸಾವಿರಾರು ಮನೆಗಳು ನಾಶವಾಗಿವೆ. ವಾಹನಗಳು ಕೊಚ್ಚಿ ಹೋಗಿವೆ. ಜನರು ಎತ್ತರದ ಪ್ರದೇಶಗಳಿಗೆ ತೆರಳುತ್ತಿದ್ದಾರೆ.