ಗಾಜಾ ನಗರ:ವಿನಾಶಕಾರಿ ಇಸ್ರೇಲ್ - ಹಮಾಸ್ ಯುದ್ಧದ ಸಂದರ್ಭದಲ್ಲಿ ಜನಿಸಿದ್ಧ 10 ತಿಂಗಳ ಗಂಡು ಮಗುವಿಗೆ ಪೋಲಿಯೊ ದೃಢಪಟ್ಟಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 25 ವರ್ಷಗಳಲ್ಲಿ ಗಾಜಾದಲ್ಲಿ ಇದು ಮೊದಲ ಪ್ರಕರಣ ಇದಾಗಿದೆ.
ಅಬ್ದೆಲ್ - ರಹಮಾನ್ ಎಂಬ ಮಗುವಿಗೆ ಇದ್ದಕ್ಕಿದ್ದಂತೆಯೇ ಕಾಲಿನಲ್ಲಿ ಪಾರ್ಶ್ವವಾಯು ಉಂಟಾಗಿ ಮಗು ತೆವಳುವುದನ್ನೇ ನಿಲ್ಲಿಸಿದೆ. ಮಗುವಿನ ತಾಯಿ ನನ್ನ ಮಗು ಆರೋಗ್ಯಯುತವಾಗಿತ್ತು. ಆದರೆ, ಇದ್ದಕ್ಕಿದ್ದಂತೆ ಮಗು ತೆವಳುವುದು, ಕೂರುವುದು, ಚಲಿಸುವುದನ್ನು ನಿಲ್ಲಿಸಿದೆ ಎಂದು ಕಣ್ಣೀರು ಹಾಕುತ್ತಿದ್ದಾರೆ. ಗಾಜಾದಲ್ಲಿ ತಿಂಗಳುಗಳಿಂದ ಆರೋಗ್ಯ ಕಾರ್ಯಕರ್ತರು ಪೋಲಿಯೋದ ಏಕಾಏಕಿ ಸಂಭವನೀಯತೆಯ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ.
ಇಸ್ರೇಲ್ - ಹಮಾಸ್ ಯುದ್ಧಕ್ಕಿಂತ ಮೊದಲೇ ಗಾಜಾದ ಮಕ್ಕಳಿಗೆ ಹೆಚ್ಚಾಗಿ ಪೋಲಿಯೋ ವಿರುದ್ಧ ಲಸಿಕೆ ನೀಡಲಾಗಿತ್ತು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದರೆ, ಈ ಮಗುವಿಗೆ ಲಸಿಕೆ ನೀಡಲಾಗಿಲ್ಲ. ಏಕೆಂದರೆ ಆ ಮಗು ಅಕ್ಟೋಬರ್ 7ರ ಮೊದಲು ಜನಿಸಿದೆ. ಆ ಸಂದರ್ಭದಲ್ಲಿ ಹಮಾಸ್ ಉಗ್ರಗಾಮಿಗಳು ಇಸ್ರೇಲ್ ಮೇಲೆ ದಾಳಿ ಮಾಡಿದ್ದರು. ಇದರ ಪ್ರತೀಕಾರಕ್ಕೆ ಇಸ್ರೇಲ್ ಗಾಜಾದ ಮೇಲೆ ಆಕ್ರಮಣ ಮಾಡಿತು. ಈ ದಾಳಿಯಲ್ಲಿ ಆಸ್ಪತ್ರೆಗಳಿಗೆ ಹಾನಿಯಾದವು. ಹೀಗಾಗಿ ನವಜಾತ ಶಿಶುಗಳಿಗೆ ನಿಯಮಿತ ವ್ಯಾಕ್ಸಿನೇಷನ್ ನೀಡಲು ಸಾಧ್ಯವಾಗದೇ ನಿಲ್ಲಿಸಲಾಯಿತು.
ಪೋಲಿಯೋ ಒಮ್ಮೆ ಬಂದ ಮೇಲೆ ಚಿಕಿತ್ಸೆ ಇಲ್ಲ:ವಿಶ್ವ ಆರೋಗ್ಯ ಸಂಸ್ಥೆ ಪೋಲಿಯೋದಿಂದ ಪಾರ್ಶ್ವವಾಯುವಿಗೆ ಒಳಗಾದ ಪ್ರಕರಣದಲ್ಲಿ ಸೋಂಕಿಗೆ ಒಳಗಾದ ನೂರಾರು ಜನರಿಗೆ ರೋಗಲಕ್ಷಣಗಳು ಕಾಣಿಸುವುದಿಲ್ಲ ಎಂದು ತಿಳಿಸಿದೆ. ರೋಗಕ್ಕೆ ತುತ್ತಾಗುವ ಹೆಚ್ಚಿನ ಜನರು ರೋಗಲಕ್ಷಣಗಳನ್ನು ಅನುಭವಿಸುವುದಿಲ್ಲ. ಪೋಲಿಯೋ ಒಂದು ಬಾರಿ ಕಾಣಿಸಿಕೊಂಡರೆ ಅದಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಪೋಲಿಯೋ ಪಾರ್ಶ್ವವಾಯು ಉಂಟುಮಾಡಿದರೆ ಅದು ಶಾಶ್ವತ ರೋಗವಾಗಿ ಕಾಡುತ್ತದೆ. ಪಾರ್ಶ್ವವಾಯುವಿನಿಂದ ಉಸಿರಾಟದ ಮೇಲೆ ಪರಿಣಾಮ ಬೀರಿದರೆ ಪ್ರಾಣಕ್ಕೂ ಮಾರಕವಾಗಬಹುದು.
ವಾಕ್ಸಿನೇಷನ್ ಕಾರ್ಯಕ್ರಮ ಆರಂಭಿಸಿದ ವಿಶ್ವಸಂಸ್ಥೆ:ಗಾಜಾದಲ್ಲಿ ಉಳಿದವರಂತೆ ಪೋಲಿಯೋ ಪೀಡಿತ ಮಗುವಿನ ಕುಟುಂಬವು ಕಿಕ್ಕಿರಿದ ಟೆಂಟ್ ಕ್ಯಾಂಪ್‌ನಲ್ಲಿ ವಾಸಿಸುತ್ತಿವೆ. ಟೆಂಟ್ ಸುತ್ತಮುತ್ತ ಕಸದ ರಾಶಿಗಳು, ಬೀದಿಗಳಲ್ಲಿ ಕೊಳಕು ತ್ಯಾಜ್ಯದ ನೀರು ಹರಿಯುತ್ತಿದೆ. ಪ್ರಾಣಿ, ಕ್ರಿಮಿಗಳ ಸಂತಾನೋತ್ಪತ್ತಿಯ ಸ್ಥಳವಾಗಿದೆ. ಪೋಲಿಯೋದಂತಹ ರೋಗಗಳಿಗೆ ಇವುಗಳು ಕಾರಣವಾಗುತ್ತದೆ. ಇದು ಮಲ ವಸ್ತುವಿನ ಮೂಲಕ ಹರಡುತ್ತದೆ ಎಂದು ಇಲ್ಲಿನ ಆರೋಗ್ಯ ಕಾರ್ಯಕರ್ತರು ವಿವರಿಸಿದ್ದಾರೆ. ಸದ್ಯ ಇವೆಲ್ಲ ಕಾರಣದಿಂದ ಪೋಲಿಯೋ ಹರಡುವಿಕೆಯನ್ನು ತಡೆಗಟ್ಟಲು, ಇತರ ಕುಟುಂಬಗಳನ್ನು ರಕ್ಷಿಸಲು ವ್ಯಾಕ್ಸಿನೇಷನ್ ಅಭಿಯಾನವನ್ನು ಪ್ರಾರಂಭಿಸುವ ಯೋಜನೆಗಳನ್ನು ವಿಶ್ವಸಂಸ್ಥೆ ಅನಾವರಣಗೊಳಿಸಿದೆ.