ಹೈದರಾಬಾದ್:ಆಕರ್ಷಕ ವೇತನದ ಉದ್ಯೋಗ ನೀಡುವ ವಂಚನೆಯ ಜಾಲಕ್ಕೆ ಬಿದ್ದು ಕಾಂಬೋಡಿಯಾದಲ್ಲಿ ಒದ್ದಾಡುತ್ತಿದ್ದ ಭಾರತೀಯರನ್ನು ರಕ್ಷಿಸಲಾಗಿದೆ. ಮೋಸದ ಜಾಲದಲ್ಲಿ ಸಿಲುಕಿದ್ದ ಭಾರತೀಯರ ಮೊದಲ ತಂಡವನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲಾಗಿದೆ. ಈ ತಂಡದಲ್ಲಿ 60 ಮಂದಿ ಸ್ವದೇಶಕ್ಕೆ ಮರಳಿದ್ದಾರೆ. ಇವರನ್ನು ಮೇ 20ರಂದು ಜಿನ್ಬೈ- 4 ಎಂಬ ಸ್ಥಳದಿಂದ ರಕ್ಷಿಸಲಾಗಿದೆ ಎಂದು ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ.
ಭಾರತೀಯ ಉದ್ಯೋಗಿಗಳ ರಕ್ಷಣೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿರುವ ರಾಯಭಾರ ಕಚೇರಿ, 'ವಿದೇಶದಲ್ಲಿ ಸಿಲುಕಿರುವ ಭಾರತೀಯರಿಗೆ ಸಹಾಯ ನೀಡಲು ಯಾವಾಗಲೂ ನಾವು ಬದ್ಧ. ಕಾಂಬೋಡಿಯಾದಲ್ಲಿ ಮೋಸದ ಉದ್ಯೋಗ ಜಾಲಕ್ಕೆ ಸಿಲುಕಿದ 60 ಮಂದಿಯ ರಕ್ಷಿಸಲಾಗಿದೆ. ಕಾರ್ಯಾಚರಣೆಗೆ ಬೆಂಬಲ ನೀಡಿದ ಕಾಂಬೋಡಿಯಾ ಅಧಿಕಾರಿಗಳಿಗೆ ಧನ್ಯವಾದ' ಎಂದು ತಿಳಿಸಿದೆ.
ಮತ್ತೊಂದು ಪೋಸ್ಟ್ನಲ್ಲಿ, ಸಿಹಾನೌಕ್ವಿಲ್ಲೆ ಪ್ರಾಧಿಕಾರದ ಸಹಾಯದಿಂದ ಭಾರತೀಯರನ್ನು ರಕ್ಷಿಸಲಾಗಿದೆ. ಇವರೆಲ್ಲರನ್ನೂ ವಂಚಿಸಿ ಸಿಹಾನೌಕ್ವಿಲ್ಲೆಯೊಂದ ನಾಮ್ ಪೆನ್ ಸ್ಥಳಕ್ಕೆ ಕಳುಹಿಸಲಾಗಿತ್ತು. ಇದೀಗ ಅಗತ್ಯ ಪ್ರಯಾಣ ದಾಖಲೆ ಮತ್ತು ಇತರೆ ವ್ಯವಸ್ಥೆಗಳ ಸಹಾಯದಿಂದ ಮರಳಿ ಕರೆತರಲಾಗಿದೆ ಎಂದು ಮಾಹಿತಿ ನೀಡಿದೆ.
ಕಾಂಬೋಡಿಯಾಗೆ ಉದ್ಯೋಗ ಅರಸಿ ತೆರಳುವವರಿಗೆ ಭಾರತೀಯ ರಾಯಭಾರಿ ಕಚೇರಿ ಇತ್ತೀಚೆಗೆ ಮಹತ್ವದ ಸಲಹೆ ನೀಡಿತ್ತು. ವಿದೇಶಾಂಗ ಇಲಾಖೆಯ ಅನುಮೋದಿತ ಅಧಿಕೃತ ಏಜೆಂಟ್ಗಳಿಂದ ಉದ್ಯೋಗ ಭದ್ರತೆ ಸಿಕ್ಕಲ್ಲಿ ಮಾತ್ರ ವಿದೇಶಕ್ಕೆ ಹೋಗಬೇಕು. ಪ್ರವಾಸಿ ವೀಸಾದಲ್ಲಿ ಉದ್ಯೋಗ ಪಡೆಯಬಹುದು ಎಂಬ ಆಮಿಷಕ್ಕೆ ಬಲಿಯಾಗಬೇಡಿ ಎಂದು ತಿಳಿಸಿದೆ.
ಇದನ್ನೂ ಓದಿ: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅಂತ್ಯಕ್ರಿಯೆ: ಉಪ ರಾಷ್ಟ್ರಪತಿ ಜಗದೀಪ್ ಧನಕರ್ರಿಂದ ಅಂತಿಮ ನಮನ