ಟೆಲ್ ಅವೀವ್:ಗಾಜಾ ಪಟ್ಟಿಯ ರಾಫಾ ಪ್ರದೇಶದ ಸುರಂಗವೊಂದರಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಆರು ಒತ್ತೆಯಾಳುಗಳ ಶವಗಳನ್ನು ಇಸ್ರೇಲ್ ರಕ್ಷಣಾ ಪಡೆಗಳು ಪತ್ತೆ ಹಚ್ಚಿ ವಶಪಡಿಸಿಕೊಂಡಿವೆ. ಮೃತರನ್ನು ಹರ್ಶ್ ಗೋಲ್ಡ್ ಬರ್ಗ್, ಈಡನ್ ಯೆರುಶಾಲ್ಮಿ, ಕಾರ್ಮೆಲ್ ಗ್ಯಾಟ್, ಅಲ್ಮೋಗ್ ಸರೂಸಿ, ಅಲೆಕ್ಸ್ ಲುಬ್ನೋವ್ ಮತ್ತು ಒರಿ ಡ್ಯಾನಿನೊ ಎಂದು ಗುರುತಿಸಲಾಗಿದೆ ಎಂದು ಇಸ್ರೇಲ್ ವಿದೇಶಾಂಗ ಸಚಿವಾಲಯವು ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ. ಮೃತರ ಫೋಟೊಗಳನ್ನು ಕೂಡ ಐಡಿಎಫ್ ಬಿಡುಗಡೆ ಮಾಡಿದೆ.
ಹಮಾಸ್ ವಶದಲ್ಲಿ ಇನ್ನೂ 101 ಇಸ್ರೇಲಿಗರು: ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸೇರಿದಂತೆ ಹಮಾಸ್ ಗಾಜಾದಲ್ಲಿ ಈಗಲೂ 101 ಒತ್ತೆಯಾಳುಗಳನ್ನು ಹಿಡಿದಿಟ್ಟುಕೊಂಡಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ವಕ್ತಾರ ಲೆಫ್ಟಿನೆಂಟ್ ಕರ್ನಲ್ ನದವ್ ಶೋಶಾನಿ ಭಾನುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಅಕ್ಟೋಬರ್ 7 ರ ಹತ್ಯಾಕಾಂಡದ ಸಮಯದಲ್ಲಿ ಹಮಾಸ್ ಜೀವಂತವಾಗಿ ಒತ್ತೆಯಾಳುಗಳಾಗಿ ಕರೆದುಕೊಂಡು ಹೋಗಿದ್ದವರ ಪೈಕಿ ಆರು ಇಸ್ರೇಲಿಗರ ಶವಗಳು ರಫಾದ ಸುರಂಗದೊಳಗೆ ಪತ್ತೆಯಾಗಿವೆ ಮತ್ತು ಎಲ್ಲ ಶವಗಳನ್ನು ಇಸ್ರೇಲ್ಗೆ ಮರಳಿ ತರಲಾಗಿದೆ ಎಂದು ಭಾರವಾದ ಹೃದಯದಿಂದ ತಿಳಿಸುತ್ತಿದ್ದೇವೆ" ಎಂದು ವಕ್ತಾರರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ತಿಳಿಸಿದ್ದಾರೆ.
"ನಮ್ಮ ಸೈನಿಕರು ಒತ್ತೆಯಾಳುಗಳನ್ನು ಬಿಡಿಸಿಕೊಳ್ಳಲು ರಫಾದ ಸುರಂಗದೊಳಗೆ ತಲುಪುವ ಕೆಲವೇ ಹೊತ್ತಿಗೆ ಮುಂಚೆ ಹಮಾಸ್ ಉಗ್ರಗಾಮಿಗಳು ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ" ಎಂದು ಅವರು ಹೇಳಿದರು.