ಟೆಹ್ರಾನ್: ಪಾಕಿಸ್ತಾನದಿಂದ ಇರಾಕ್ಗೆ ಶಿಯಾ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮಧ್ಯ ಇರಾನ್‌ನಲ್ಲಿ ಅಪಘಾತಕ್ಕೀಡಾಗಿದ್ದು, ಕನಿಷ್ಠ 28 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ಮಧ್ಯ ಇರಾನಿನ ಯಾಜ್ದ್ ಪ್ರಾಂತ್ಯದಲ್ಲಿ ಮಂಗಳವಾರ ರಾತ್ರಿ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯ ತುರ್ತು ಸೇವೆಗಳ ಅಧಿಕಾರಿ ಮೊಹಮ್ಮದ್ ಅಲಿ ಮಾಲೆಕ್ ಜಾದೆ ತಿಳಿಸಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಐಆರ್ಎನ್ಎ ಸುದ್ದಿ ಸಂಸ್ಥೆ ತಿಳಿಸಿದೆ.
ಅಪಘಾತದಲ್ಲಿ 23 ಜನ ಗಾಯಗೊಂಡಿದ್ದು, ಅವರಲ್ಲಿ 14 ಜನರ ಸ್ಥಿತಿ ಗಂಭೀರವಾಗಿದೆ. ಬಸ್ನಲ್ಲಿದ್ದ ಎಲ್ಲಾ ಪ್ರಯಾಣಿಕರು ಪಾಕಿಸ್ತಾನ ಮೂಲದವರು ಎಂದು ಅವರು ಹೇಳಿದರು. ಇರಾನ್ ರಾಜಧಾನಿ ಟೆಹ್ರಾನ್ನಿಂದ ಆಗ್ನೇಯಕ್ಕೆ 500 ಕಿಲೋಮೀಟರ್ ದೂರದಲ್ಲಿರುವ ಟಾಫ್ಟ್ ನಗರದ ಹೊರಗೆ ಬಸ್ ಅಪಘಾತಕ್ಕೀಡಾಗಿದ್ದು, ಬಸ್ನಲ್ಲಿ 51 ಜನ ಪ್ರಯಾಣಿಸುತ್ತಿದ್ದರು.
ಇರಾನಿನ ಸರ್ಕಾರಿ ಟೆಲಿವಿಷನ್ ಅಪಘಾತಕ್ಕೀಡಾದ ಬಸ್ನ ದೃಶ್ಯಾವಳಿಗಳನ್ನು ಪ್ರಸಾರ ಮಾಡಿದೆ. ಹೆದ್ದಾರಿಯಲ್ಲಿ ತಲೆಕೆಳಗಾಗಿ ಬಿದ್ದಿರುವ ಬಸ್ನ ಮೇಲ್ಛಾವಣಿಯನ್ನು ಒಡೆದು ಅದರ ಎಲ್ಲ ಬಾಗಿಲುಗಳನ್ನು ತೆರೆಯಲಾಯಿತು. ರಸ್ತೆಯುದ್ದಕ್ಕೂ ಒಡೆದ ಗಾಜಿನ ಚೂರುಗಳು ಮತ್ತು ಅವಶೇಷಗಳ ಬಿದ್ದಿರುವುದು ದೃಶ್ಯಗಳಲ್ಲಿ ಕಾಣಿಸಿದೆ. ಬಸ್ನ ಬ್ರೇಕ್ಗಳು ವಿಫಲವಾಗಿರುವುದು ಮತ್ತು ಚಾಲಕನ ಅಜಾಗರೂಕತೆ ಅಪಘಾತಕ್ಕೆ ಕಾರಣ ಎಂದು ಅಧಿಕಾರಿ ಮೊಹಮ್ಮದ್ ಅಲಿ ಮಾಲೆಕ್ ಜಾದೆ ಹೇಳಿದ್ದಾರೆ.