ಬ್ರಸೆಲ್ಸ್ , ಬೆಲ್ಜಿಯಂ: 1850ರಲ್ಲಿ ಹವಾಮಾನ ಮಾಹಿತಿಯ ದಾಖಲೀಕರಣ ಆರಂಭವಾದ ನಂತರ 2024ನೇ ವರ್ಷವು ಜಾಗತಿಕವಾಗಿ ಅತ್ಯಂತ ಬಿಸಿಯಾದ ವರ್ಷವಾಗಿತ್ತು ಎಂದು ಯುರೋಪಿಯನ್ ಯೂನಿಯನ್ ಅನುದಾನದಡಿ ಕೆಲಸ ಮಾಡುವ ಕೋಪರ್ನಿಕಸ್ ಹವಾಮಾನ ಬದಲಾವಣೆ ಸೇವಾ ಸಂಸ್ಥೆ (ಸಿ3ಎಸ್) ಶುಕ್ರವಾರ ಹೇಳಿದೆ. ಹೀಗಾಗಿ ಹವಾಮಾನ ಬದಲಾವಣೆ ತಡೆಗೆ ತುರ್ತು ಜಾಗತಿಕ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ ಎಂದು ತಜ್ಞರು ಹೇಳಿದ್ದಾರೆ.
2024ನೇ ವರ್ಷವು ಪ್ಯಾರಿಸ್ ಒಪ್ಪಂದದಲ್ಲಿ ನಿಗದಿಪಡಿಸಲಾದ ನಿರ್ಣಾಯಕ ಮಿತಿಯಾದ ಕೈಗಾರಿಕಾ ಪೂರ್ವ ಮಟ್ಟಕ್ಕಿಂತ ಸರಾಸರಿ ಜಾಗತಿಕ ತಾಪಮಾನವು 1.5 ಡಿಗ್ರಿ ಸೆಲ್ಸಿಯಸ್ ಮೀರಿದ ಮೊದಲ ಕ್ಯಾಲೆಂಡರ್ ವರ್ಷವಾಗಿದೆ ಎಂದು ಯುರೋಪಿಯನ್ ಹವಾಮಾನ ಸಂಸ್ಥೆಯ ಪತ್ರಿಕಾ ಪ್ರಕಟಣೆಯನ್ನು ಉಲ್ಲೇಖಿಸಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
2024 ರಲ್ಲಿ ಜಾಗತಿಕ ಸರಾಸರಿ ತಾಪಮಾನವು 15.1 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಇದು 2023 ಕ್ಕಿಂತ 0.12 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ ಹಾಗೂ ಕೈಗಾರಿಕಾ ಪೂರ್ವ ಮಟ್ಟಕ್ಕಿಂತ 1.6 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ ಎಂದು ಕೋಪರ್ನಿಕಸ್ ಹೇಳಿದೆ. 2023 ಮತ್ತು 2024ರ ಎರಡು ವರ್ಷಗಳ ಸರಾಸರಿಯು ಕೈಗಾರಿಕಾ ಪೂರ್ವ ಮಟ್ಟಕ್ಕಿಂತ 1.5 ಡಿಗ್ರಿ ಸೆಲ್ಸಿಯಸ್ ಮಿತಿ ಮೀರಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.