ಗಾಜಾ:ದಕ್ಷಿಣ ಗಾಜಾ ಪಟ್ಟಿಯ ರಫಾ ನಗರದ ಮೇಲೆ ಇಸ್ರೇಲ್ ನಡೆಸಿದ ಬಾಂಬ್ ದಾಳಿಯಲ್ಲಿ ಇಬ್ಬರು ಇಸ್ರೇಲ್ನ ಒತ್ತೆಯಾಳುಗಳು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ತಿಳಿಸಿದೆ. ಕೆಲವು ದಿನಗಳ ಹಿಂದೆ ನಡೆದ ಏರ್ ಸ್ಟ್ರೈಕ್‌ನಲ್ಲಿ ಇಬ್ಬರು ಒತ್ತೆಯಾಳುಗಳ ಹತ್ಯೆಯಾಗಿದೆ ಎಂಬುವುದಾಗಿ ಹಮಾಸ್ನ ಸಶಸ್ತ್ರ ವಿಭಾಗ ಅಲ್-ಕಸ್ಸಾಮ್ ಬ್ರಿಗೇಡ್ಸ್ ಟೆಲಿಗ್ರಾಮ್‌ನಲ್ಲಿ ವಿಡಿಯೋ ಬಿಡುಗಡೆ ಮಾಡಿದೆ ಎಂದು ವರದಿಯಾಗಿದೆ.
ಜೂನ್ 8ರಂದು ಅಲ್-ಕಸ್ಸಾಮ್ ಬ್ರಿಗೇಡ್ಸ್ ಸೆಂಟ್ರಲ್ ಗಾಜಾ ಪಟ್ಟಿಯಲ್ಲಿ ನಾಲ್ವರು ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಕಾರ್ಯಾಚರಣೆಯ ಸಮಯದಲ್ಲಿ ಇಸ್ರೇಲ್ ಸೇನೆಯು ಹಲವಾರು ಒತ್ತೆಯಾಳುಗಳನ್ನು ಹತ್ಯೆ ಮಾಡಿದೆ ಎಂದು ಹಮಾಸ್ ಹೇಳಿದೆ. ಈ ಬಗ್ಗೆ ಇಸ್ರೇಲ್ ಸೇನೆಯು ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಒಟ್ಟು ಸಾವಿನ ಸಂಖ್ಯೆಕ್ಕೆ 37,266ಕ್ಕೇರಿಕೆ: ಪ್ಯಾಲೇಸ್ಟೀನ್-ಇಸ್ರೇಲ್ ಯುದ್ಧದಲ್ಲಿ ಶುಕ್ರವಾರದ ಹೊತ್ತಿಗೆ ಪ್ಯಾಲೇಸ್ಟೀನಿಯನ್ಗಳ ಒಟ್ಟು ಸಾವಿನ ಸಂಖ್ಯೆ 37,266ಕ್ಕೆ ಏರಿದೆ. ಅಂದಾಜು 85,102 ಜನರು ಗಾಯಗೊಂಡಿದ್ದಾರೆ ಎಂದು ಹಮಾಸ್ನ ಆರೋಗ್ಯ ಅಧಿಕಾರಿಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮತ್ತೊಂದೆಡೆ, ಗಾಜಾ ಪಟ್ಟಿಯಾದ್ಯಂತ ತನ್ನ ಕಾರ್ಯಾಚರಣೆ ಮುಂದುವರೆದಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ಹೇಳಿಕೆ ಬಿಡುಗಡೆ ಮಾಡಿದೆ.
ರಫಾ, ಗಾಜಾದಲ್ಲಿ ಮುಂದುವರೆದ ಇಸ್ರೇಲ್ ಕಾರ್ಯಾಚರಣೆ:ರಫಾದಲ್ಲಿ ಗುಪ್ತಚರ ಮಾಹಿತಿ ಆಧಾರಿತ ಕಾರ್ಯಾಚರಣೆಗಳನ್ನು ಇಸ್ರೇಲ್ ಪಡೆಗಳು ಮುಂದುವರೆಸುತ್ತಿವೆ. ಹಲವಾರು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲಾಗಿದೆ. ಕಳೆದ ದಿನಗಳಿಂದ ಹೆಚ್ಚಿನ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಭೂಗತ ಸುರಂಗದ ಶಾಫ್ಟ್‌ಗಳನ್ನು ಪತ್ತೆ ಹಚ್ಚಲಾಗಿದೆ. ಸೆಂಟ್ರಲ್ ಗಾಜಾ ಪಟ್ಟಿಯಲ್ಲೂ ಸೇನಾ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಇಸ್ರೇಲ್ ಸೇನೆ ಹೇಳಿಕೊಂಡಿದೆ.
2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ಮಾಡಿತ್ತು. ಈ ದಾಳಿಯಲ್ಲಿ ಸುಮಾರು 1,200 ಜನರು ಮೃತಪಟ್ಟಿದ್ದರು. ಸುಮಾರು 250 ಮಂದಿಯನ್ನು ಹಮಾಸ್ ಒತ್ತೆಯಾಳಾಗಿಸಿಕೊಂಡಿತ್ತು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಇಸ್ರೇಲ್ ಗಾಜಾ ಪಟ್ಟಿಯಲ್ಲಿ ಹಮಾಸ್ ವಿರುದ್ಧ ದೊಡ್ಡ ಪ್ರಮಾಣದ ಸಮರ ಸಾರಿಸಿದೆ. ಅಂದಿನಿಂದಲೂ ಈ ಸಂಘರ್ಷ ಇನ್ನೂ ಮುಂದುವರೆದಿದೆ. ಶಾಂತಿ ಒಪ್ಪಂದ ಮಾಡಿಕೊಳ್ಳುವಂತೆ ಹಲವು ರಾಷ್ಟ್ರಗಳು ಇಸ್ರೇಲ್ ಮೇಲೆ ಒತ್ತಡ ಹಾಕುತ್ತಲೇ ಇವೆ. ಆದರೆ, ಇಸ್ರೇಲ್ ಮಾತ್ರ ಪ್ಯಾಲೇಸ್ಟೈನ್ ಮೇಲೆ ತನ್ನ ಆಕ್ರಮಣ ಮುಂದುವರೆಸಿದೆ. ಮತ್ತೊಂದು ಕಡೆ ಆಮಾಯಕರ ಮೇಲಿನ ಇಸ್ರೇಲ್ ದಾಳಿಗೆ ವಿಶ್ವಾದ್ಯಂತ ಖಂಡನೆಗಳು ವ್ಯಕ್ತವಾಗುತ್ತಿವೆ (ಐಎಎನ್‌ಎಸ್)
ಇದನ್ನೂ ಓದಿ:ವಾಣಿಜ್ಯ ಹಡಗಿನ ಮೇಲೆ ಯೆಮೆನ್‌ನ ಹೌತಿ ಬಂಡುಕೋರರಿಂದ ಕ್ರೂಸ್ ಕ್ಷಿಪಣಿ ದಾಳಿ: ಅಮೆರಿಕ ಗರಂ