ಹೆನಾನ್(ಚೀನಾ):ಚೀನಾದ ಹೆನಾನ್ ಪ್ರಾಂತ್ಯದ ವಸತಿ ಶಾಲೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 13 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಶುಕ್ರವಾರ ರಾತ್ರಿ ಚಿಕ್ಕ ಮಕ್ಕಳ ಈ ವಸತಿ ಶಾಲೆಯಲ್ಲಿ ಅವಘಡ ಸಂಭವಿಸಿದೆ. ಈ ಶಾಲೆಯು ಹೆನಾನ್ ಪ್ರಾಂತ್ಯದ ಯಂಶಾನ್‌ಪು ಗ್ರಾಮದಲ್ಲಿದೆ.
ಇದು ಖಾಸಗಿ ಶಾಲೆಯಾಗಿದ್ದು, ಈ ಶಾಲೆಯಲ್ಲಿ ನರ್ಸರಿ ಮತ್ತು ಪ್ರಾಥಮಿಕ ತರಗತಿಗಳ ಮಕ್ಕಳು ಓದುತ್ತಿದ್ದರು. ಈ ಪ್ರಕರಣದಲ್ಲಿ ನಾನ್ಯಾಂಗ್ ನಗರದ ಬಳಿ ಇರುವ ಶಾಲೆಯ ಮ್ಯಾನೇಜರ್ನನ್ನು ಬಂಧಿಸಲಾಗಿದೆ. ಅಪಘಾತದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಬೆಂಕಿ ಅವಘಡಕ್ಕೆ ಕಾರಣಗಳು ತಿಳಿದುಬಂದಿಲ್ಲ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.
ಸುದ್ದಿ ತಿಳಿದಾಕ್ಷಣ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡಿದೆ. ಬೆಂಕಿಯನ್ನು ಹತೋಟಿಗೆ ತರಲಾಗಿದ್ದು, ಅಗ್ನಿಶಾಮಕ ದಳದವರು ಬೆಂಕಿ ಕಾಣಿಸಿಕೊಂಡ ಒಂದು ಗಂಟೆಯೊಳಗೆ ನಂದಿಸಿದ್ದಾರೆ. ಹೆನಾನ್‌ನ ಯಂಶಾನ್‌ಪು ಗ್ರಾಮದ ಯಿಂಗ್‌ಕೈ ಶಾಲೆಯಲ್ಲಿ ರಾತ್ರಿ 11 ಗಂಟೆಗೆ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಕೂಡಲೇ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದ್ದೇವೆ ಎಂದು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದೆ. ಈ ಘಟನೆಯ ವಿಡಿಯೋ ದೃಶ್ಯಾವಳಿಗಳು ಸಹ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗ್ತಿವೆ. ಈ ವಿಡಿಯೋ ನೋಡಿದ ನೆಟ್ಟಿಗರು ಹೌಹಾರಿದ್ದಾರೆ.