ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದೆ. ವಯಸ್ಸಿನ ಮಿತಿ ಇಲ್ಲದೇ ವಯಸ್ಕರೂ ಸಹ ಹೃದಯಾಘಾತಕ್ಕೆ ಒಳಗಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮಕ್ಕಳು, ಯುವಕರು ಕೂಡ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಹೃದಯದ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಬಹಳ ಮುಖ್ಯವಾಗಿದೆ. ಆದರೆ, ಹಲವರಿಗೆ ಹೃದಯದ ಕಾಳಜಿ ಮಹತ್ವದ ಅರಿವಿಲ್ಲ. ಹೃದ್ರೋಗಗಳ ಬಗ್ಗೆ ಜನರಲ್ಲಿ ಅರಿವು ಮತ್ತು ಜ್ಞಾನವು ಕಡಿಮೆ ಇದೆ. ಈ ನಿಟ್ಟಿಯಲ್ಲಿ ಜನರಿಗೆ ಹೃದಯದ ಮಹತ್ವವನ್ನು ತಿಳಿಸುವ ಸಲುವಾಗಿ ಪ್ರತಿವರ್ಷ ಸೆ.29ರಂದು ವಿಶ್ವ ಹೃದಯ ದಿನವನ್ನು (World Heart Day 2024) ಆಚರಿಸಲಾಗುತ್ತದೆ.
ಅಧ್ಯಯನಗಳ ಪ್ರಕಾರ, ಭಾರತದಲ್ಲಿಯೇ ಅಂದಾಜು 8 ರಿಂದ 10 ಮಿಲಿಯನ್ ಜನರು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ ಎನ್ನಲಾಗಿದೆ. ಈ ಹೃದಯಾಘಾತವಾದ ಸಂದರ್ಭದಲ್ಲಿ ವೈದ್ಯಕೀಯ ಚಿಕಿತ್ಸೆಗಳು ಹಾಗೂ ಇದಕ್ಕೆ ನೀಡುವ ಔಷಧಗಳ ಬಗ್ಗೆ ಹೆಚ್ಚಾಗಿ ಮಾಹಿತಿ ಇಲ್ಲ. ಹೃದಯಾಘಾತವಾದ ಸಂದರ್ಭದಲ್ಲಿ ಅಥವಾ ಹೃದಯ ಸಂಬಂಧಿ ಕಾಯಿಲೆಗೆ ಯಾವ ರೀತಿಯ ಚಿಕಿತ್ಸೆ ಹಾಗೂ ಔಷಧಗಳನ್ನು ನೀಡಲಾಗುತ್ತದೆ ಎಂಬುದರ ಕುರಿತು ವೈದ್ಯರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ಹೃದಯಾಘಾತವಾಗಲು ಕಾರಣಗಳೇನು?:ಹೃದಯವು ರಕ್ತವನ್ನು ಪರಿಣಾಮಕಾರಿಯಾಗಿ ಪಂಪ್ ಮಾಡಲು ಸಾಧ್ಯವಾಗದಿದ್ದಾಗ ಹೃದಯಾಘಾತ ಸಂಭವಿಸಲಿದೆ. ಇದು ಆಯಾಸ, ಉಸಿರಾಟದ ತೊಂದರೆ ಸೇರಿದಂತೆ ಇತರ ಲಕ್ಷಣಗಳಿಗೆ ಕಾರಣವಾಗುತ್ತದೆ. ಭಾರತದಲ್ಲಿ ಹೆಚ್ಚುತ್ತಿರುವ ಹೃದಯಾಘಾತವು ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಪರಿಧಮನಿ, ಅಪಧಮನಿ ಕಾಯಿಲೆಯ ಪ್ರಮಾಣದಿಂದ ಎನ್ನಲಾಗುತ್ತಿದೆ. ಹೃದಯಾಘಾತವಾದ ಸಂದರ್ಭದಲ್ಲಿ ಸಕಾಲಿಕ ಮತ್ತು ಪರಿಣಾಮಕಾರಿ ಚಿಕಿತ್ಸೆ ನೀಡಿದರೆ ಬದುಕುಳಿಸುವ ಪ್ರಮಾಣ ಹೆಚ್ಚು ಎನ್ನುತ್ತಾರೆ ಫೋರ್ಟಿಸ್ ಆಸ್ಪತ್ರೆಯ ಸಮಾಲೋಚಕ ಹೃದ್ರೋಗ ವಿಭಾಗದ ಡಾ. ರಾಜ್‌ಪಾಲ್ ಸಿಂಗ್ ಆರ್.ಎಲ್.
ಹೃದಯ ವೈಫಲ್ಯಕ್ಕೆ ಯಾವೆಲ್ಲಾ ಔಷಧಗಳು ಲಭ್ಯವಿದೆ?:ಹೃದಯಾಘಾತವನ್ನು ಔಷಧಗಳ ಮೂಲಕವೂ ತಡೆಯಬಹುದಾಗಿದೆ. ಸಾಮಾನ್ಯವಾಗಿ ಸೂಚಿಸಲಾದ ಔಷಧಗಳಲ್ಲಿ ಆಂಜಿಯೋಟೆನ್ಸಿನ್- ಪರಿವರ್ತಿಸುವ ಕಿಣ್ವ (ACE) ಪ್ರತಿರೋಧಕಗಳು ಮತ್ತು ಆಂಜಿಯೋಟೆನ್ಸಿನ್ ರಿಸೆಪ್ಟರ್ ಬ್ಲಾಕರ್‌ಗಳು (ARBs) ಸೇರಿವೆ. ಇದು ರಕ್ತನಾಳಗಳನ್ನು ವಿಶ್ರಾಂತಿ ಮಾಡಲು ಮತ್ತು ಹೃದಯದ ಕೆಲಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇತರ ಅಗತ್ಯ ಔಷಧಗಳಲ್ಲಿ ಪ್ರಮುಖವಾಗಿ, ಬೀಟಾ- ಬ್ಲಾಕರ್‌ಗಳು ಸೇರಿವೆ. ಇದು ಹೃದಯ ಬಡಿತವನ್ನು ಕಡಿಮೆ ಮಾಡುವ ಜೊತೆಗೆ, ಹೃದಯದ ಕಾರ್ಯವನ್ನು ಸುಧಾರಿಸುತ್ತದೆ.