ಹೈದರಾಬಾದ್: ಮೆನೋಪಾಸ್ ಅಂದರೆ ಮುಟ್ಟು ನಿಲ್ಲುವ ಅವಧಿಯಲ್ಲಿ ಅನೇಕ ಮಹಿಳೆಯರು ನೈಸರ್ಗಿಕವಾಗಿ ತೂಕ ಹೆಚ್ಚಳಗೊಳ್ಳುತ್ತಾರೆ. ಈ ಸಮಯದಲ್ಲಿ ದೇಹ ಹಾರ್ಮೋನ್ ಪರಿಣಾಮಕ್ಕೆ ಒಳಗಾಗುವುದರಿಂದ ಅನೇಕ ಬದಲಾವಣೆಗಳು ಆಗುತ್ತದೆ. ತಜ್ಞರ ಪ್ರಕಾರ ಈ ಸಂದರ್ಭದಲ್ಲಿ ಹೊಟ್ಟೆಯ ಕೊಬ್ಬು ಹೆಚ್ಚುತ್ತದೆ. ಈ ಕಿಬ್ಬೊಟ್ಟೆ ಮತ್ತೊಂದು ಸಮಸ್ಯೆಗೆ ಕಾರಣವೂ ಆಗಬಹುದು. ಈ ಹಿನ್ನೆಲೆ 40ರ ವಯಸ್ಸಿನಲ್ಲಿ ಅಂದರೆ, ಮೆನೋಪಾಸ್ ಆರಂಭಿಕ ಹಂತದಲ್ಲೇ ಇದರ ತಡೆಗಟ್ಟುವಿಕೆಗೆ ಅಗತ್ಯ ಕ್ರಮ ನಡೆಸಬಹುದು. ಹಾಗೆಂದ ಮಾತ್ರಕ್ಕೆ ಹೆಚ್ಚು ಕಷ್ಟ ಪಡಬೇಕಿಲ್ಲ. ನಿಮ್ಮ ದೈನಂದಿನ ಡಯಟ್ನಲ್ಲಿ ಕೆಲವು ಪದಾರ್ಥಗಳನ್ನು ಸೇರಿಸುವುದು ಮರೆಯಬೇಡಿ.
ಅಗಸೆ ಬೀಜ: ಅಗಸೆ ಬೀಜ ಆರೋಗ್ಯಕ್ಕೆ ಮಾತ್ರವಲ್ಲ, ತೂಕ ಇಳಿಸುವಲ್ಲಿ ಕೂಡ ಪರಿಣಾಮಕಾರಿಯಾಗಿದೆ. ಇದರಲ್ಲಿನ ಮೊನೊಸ್ಯಾಚುರೇಟೆಡ್ ಕೊಬ್ಬು ತೂಕ ಇಳಿಸುವಲ್ಲಿ ಪ್ರಮುಖವಾಗಿದೆ. ಇದು ದೇಹದಲ್ಲಿನ ಅಧಿಕ ನೀರನ್ನು ತಡೆಗಟ್ಟಿ, ಈಸ್ಟ್ರೋಜನ್ ಮಟ್ಟವನ್ನು ನಿಯಂತ್ರಿಸುತ್ತದೆ.
ಸಬ್ಜಾ ಬೀಜಗಳು: ಫೈಬರ್ ಸಮೃದ್ಧವಾಗಿರುವ ಇದು ಹೊಟ್ಟೆಯ ಉಬ್ಬರ, ಜೀರ್ಣ ಸಮಸ್ಯೆಯನ್ನು ನಿವಾರಿಸುತ್ತದೆ. ಇದಕ್ಕಿಂತ ಹೆಚ್ಚಾಗಿ, ತಜ್ಞರು ಹೇಳುವಂತೆ ಇದು ಹೊಟ್ಟೆ ಸುತ್ತ ಸಂಗ್ರಹವಾಗುವ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ.
ಆಪಲ್ ಸಿಡರ್ ವಿನೆಗರ್: ಆಪಲ್ ಸಿಡರ್ ವಿನೆಗರ್ನಲ್ಲಿ ಕಡಿಮೆ ಕ್ಯಾಲೋರಿ ಇದ್ದು, ಕೆಟ್ಟ ಕೊಬ್ಬು ಕರಗುವಲ್ಲಿ ಪರಿಣಾಮಕಾರಿಯಾಗಿದೆ. ಪ್ರತಿನಿತ್ಯ ಕುಡಿಯುವ ನೀರಿಗೆ ಎರಡು ಚಮಚ ಇದನ್ನು ಸೇರಿಸುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದಾಗಿದೆ.
2006ರಲ್ಲಿ ಜರ್ನಲ್ ಆಫ್ ಫಂಕ್ಷನಲ್ ಫುಡ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಆರು ವಾರಗಳ ಕಾಲ ನೀರಿಗೆ ಆಪಲ್ ಸಿಂಡರ್ ವಿನೆಗರ್ ಬೆರಸಿ ಕುಡಿಯುವುದರಿಂದ ತೂಕ ಮತ್ತು ಎಲ್ಡಿಎಲ್ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗಿದೆ. ಇದು ಕೊಬ್ಬನ್ನು ಕರಗಿಸುವಲ್ಲಿ ಸಹಾಯಕಾರಿಯಾಗಿದೆ ಎಂದು ಅಧ್ಯಯನದಲ್ಲಿ ಭಾಗಿಯಾದ ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಆಗ್ರಿಕಲ್ಚರ್ನ ಪ್ರಮುಖ ನ್ಯೂಟ್ರಿಷಿಯನಿಸ್ಟ್ ಡಾ ಜೊಸುಹ್ ಬೆಗ್ಲೆರ್ ತಿಳಿಸಿದ್ದಾರೆ.
ಚಕ್ಕೆ: ಒತ್ತಡದ ಹಾರ್ಮೋನ್ ಆಗಿರುವ ಕಾರ್ಟಿಸೋಲ್ನಿಂದ ಹೊಟ್ಟೆಯ ಕೊಬ್ಬು ಸಂಗ್ರಹವಾಗುತ್ತದೆ. ಇದಕ್ಕೆ ಚಕ್ಕೆ ಉತ್ತಮವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಇದು ಈ ಹಾರ್ಮೋನ್ ಮಟ್ಟ ಕಡಿಮೆ ಮಾಡುತ್ತದೆ.