ಹೈದರಾಬಾದ್: ಭಾರತದೆಲ್ಲೆಡೆ ಮನೆಯಲ್ಲಿ ರೋಟಿ ಅಥವಾ ರೊಟ್ಟಿ ಎಂಬುದು ಸಾಮಾನ್ಯವಾಗಿ ಕಾಣ ಸಿಗುವ ಆರೋಗ್ಯಕರ ಆಹಾರ. ಭಾರತೀಯ ಅಡುಗೆ ಮನೆಯಲ್ಲಿನ ಭಾಗವಾಗಿರುವ ಈ ರೋಟಿಯನ್ನು ದೇಶದ ವಿವಿಧ ಪ್ರದೇಶಗಳಿಗೆ ಅನುಗುಣವಾಗಿ ತರಹೇವಾರಿ ಹಿಟ್ಟಿನ ಮೂಲಕ ತಯಾರಿಸಲಾಗುತ್ತದೆ. ಉದಾಹರಣೆಗೆ, ರಾಜಸ್ಥಾನದಲ್ಲಿ ಇದಕ್ಕೆ ಸಜ್ಜೆ ಬಳಕೆ ಮಾಡಿದರೆ, ಪಂಜಾಬ್ನಲ್ಲಿ ಮೈದಾ - ಗೋಧಿ ಬಳಕೆ ಮಾಡುವುದು ಕಾಣಬಹುದು. ಆದಾಗ್ಯೂ ದೇಶದ ಬಹುತೇಕ ಜನರು ರೋಟಿ ತಯಾರಿಸಲು ಗೋಧಿ ಅಥವಾ ಜೋಳದ ಬಳಕೆಯನ್ನು ಹೆಚ್ಚಾಗಿ ಮಾಡುತ್ತಾರೆ.
ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯ ಕಾಳಜಿ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ರೊಟ್ಟಿ ತಯಾರಿಸಲು ಸಿರಿಧಾನ್ಯಗಳ ಬಳಕೆ ಕೂಡ ಮಾಡಲಾಗುತ್ತಿದೆ. ಕಾರಣ ಇವು ಕಡಿಮೆ ಕ್ಯಾಲೋರಿ ಮತ್ತು ಅಧಿಕ ಫೈಬರ್ ಅಂಶ ಹೊಂದಿರುತ್ತದೆ. ಅಲ್ಲದೇ, ಜನರು ತಮ್ಮ ತೂಕ ಇಳಿಕೆಯ ಪಣತೊಟ್ಟ ಬಳಿಕ ಆಯ್ಕೆ ಮಾಡುವ ಪ್ರಮುಖ ಆಹಾರ ಕೂಡ ಈ ರೊಟ್ಟಿ ಅಥವಾ ಚಪಾತಿಯಾಗಿದೆ.
ಡಯಟ್ ಪಾಲನೆ ಮಾಡುವ ಬಹುತೇಕರು ಮೂರರಲ್ಲಿ ಒಂದು ಊಟದಲ್ಲಿ ಹಾಲು, ಹಣ್ಣು ಅಥವಾ ಹಗುರ ಆಹಾರಗಳಿಗೆ ಒತ್ತು ನೀಡುತ್ತಾರೆ. ಮತ್ತೊಂದು ಹೊತ್ತಿನ ಆಹಾರದಲ್ಲಿ ರೊಟ್ಟಿ ಇರುವುದು ಕಡ್ಡಾಯವಾಗುತ್ತದೆ. ಒಂದು ವೇಳೆ ನೀವು ಕೂಡ ತೂಕ ಇಳಿಸಬೇಕು ಎಂದಿದ್ದು, ನಿಮ್ಮ ಆಹಾರದಲ್ಲಿ ಇದನ್ನು ಸೇರಿಸಬೇಕು ಎಂದು ಯೋಚಿಸುತ್ತಿದ್ದೀರಾ. ಹಾಗಾದ್ರೆ ಯಾವ ಹಿಟ್ಟಿನಿಂದ ಮಾಡಿದ ರೊಟ್ಟಿಗಳು ತೂಕ ಇಳಿಕೆಗೆ ಸಹಾಯ ಮಾಡುತ್ತದೆ ಎಂಬುದು ಮುಖ್ಯವಾಗತ್ತದೆ. ಈ ಕುರಿತು ಪ್ರಖ್ಯಾತ ಪೋಷಕಾಂಶ ತಜ್ಞೆಯಾಗಿರುವ ರುಚಿತಾ ಬತ್ರಾ ತಮ್ಮ ಇನ್ಸ್ಟಾಗ್ರಾಂ ಪೇಜ್ನಲ್ಲಿ ವಿಡಿಯೋ ಕೂಡ ಹಂಚಿಕೊಂಡಿದ್ದಾರೆ. ಅವರ ಅನುಸಾರ, ಕೆಲವು ರೋಟಿಗಳು ಮಾತ್ರ ಕಡಿಮೆ ಕ್ಯಾಲೋರಿ ಹಾಗೂ ಸೂಕ್ಷ್ಮಪೌಷ್ಟಿಕಾಂಶ ಹೊಂದಿರುತ್ತದೆ. ಅವುಗಳ ಕುರಿತ ಮಾಹಿತಿ ಇಲ್ಲಿದೆ.
ಗೋಧಿ ಹಿಟ್ಟಿನ ರೊಟ್ಟಿ ಅಥವಾ ಚಪಾತಿ: ಚಪಾತಿ ಎಂದು ಪ್ರಖ್ಯಾತವಾಗಿರುವ ಇದು ಭಾರತೀಯರು ಹೆಚ್ಚಾಗಿ ಸೇವಿಸುವ ಆಹಾರಗಳಲ್ಲಿ ಒಂದಾಗಿದೆ. ಇದರಲ್ಲಿ 70 ರಿಂದ 80ರಷ್ಟು ಕ್ಯಾಲೋರಿ ಇದ್ದು, ವಿಟಮಿನ್ ಬಿ ಮತ್ತು ಖನಿಜಾಂಶದ ಸಮೃದ್ಧ ಗುಣ ಹೊಂದಿದೆ.
ರಾಗಿ ರೊಟ್ಟಿ: ಕ್ಯಾಲ್ಸಿಯಂ ಸಮೃದ್ಧ ಗುಣ ಇದರಲ್ಲಿದೆ. ಫೈಬರ್ ಮತ್ತು ಆ್ಯಂಟಿ ಆಕ್ಸಿಟೆಂಡ್ ಇದ್ದು, ಇದನ್ನು ದೈನಂದಿನ ಆಹಾರದಲ್ಲಿ ಸೇರಿಸಬಹುದು. ಇವು ತೂಕ ಇಳಿಕೆಗೆ ಸಹಾಯ ಮಾಡುವ ಜೊತೆಗೆ ಮೂಳೆಗಳ ಆರೋಗ್ಯ ಕಾಪಾಡುತ್ತದೆ. ಮಧುಮೇಹಿಗಳಿಗೆ ಇದು ಅದ್ಬುತ ಆಹಾರವಾಗಿದ್ದು, ರಾಗಿ ಹಿಟ್ಟಿನಲ್ಲಿ 80- 90 ರಷ್ಟು ಕ್ಯಾಲೋರಿ ಅಂಶ ಇದೆ.