Protein Rich Food Vegetarian:ನಮ್ಮ ದೇಹದಲ್ಲಿ ಸರಿಯಾದ ಚಯಾಪಚಯ ಕ್ರಿಯೆಗೆ ಹಾಗೂ ಸ್ನಾಯುಗಳು ಸದೃಢಗೊಳ್ಳಲು ಪ್ರೋಟೀನ್ ತುಂಬಾ ಅವಶ್ಯವಾಗಿದೆ. ನೀವು ಕೈಗೊಳ್ಳುವ ಕಾರ್ಯಗಳಲ್ಲಿ ಕ್ರಿಯಾಶೀಲ ಮತ್ತು ಚೈತನ್ಯಶೀಲರಾಗಿರಲು ಹೆಚ್ಚಿನ ಪ್ರೋಟೀನ್ ಭರಿತ ಆಹಾರಗಳನ್ನು ಸೇವಿಸಬೇಕಾಗುತ್ತದೆ. ಸಸ್ಯಾಹಾರಿಗಳು ಪ್ರೋಟೀನ್ ಪಡೆಯಲು ಈ ಆಹಾರ ಪದಾರ್ಥಗಳನ್ನು ತಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.
ಪ್ರೋಟೀನ್ ಭರಿತ ಆಹಾರಗಳು ಯಾವುವು?
ಬೇಳೆಕಾಳುಗಳು: ತೊಗರಿಬೇಳೆ, ಹೆಸರು ಕಾಳು ಮತ್ತು ಉದ್ದಿನ ಬೇಳೆಗಳಲ್ಲಿರುವ ಪೋಷಕಾಂಶಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ದ್ವಿದಳ ಧಾನ್ಯಗಳಲ್ಲಿ ವಿಶೇಷವಾಗಿ ಪ್ರೋಟೀನ್ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಈ ಬೇಳೆ ಕಾಳುಗಳಲ್ಲಿರುವ ಫೈಬರ್ ಅಂಶವು ದೇಹದ ತೂಕವನ್ನು ಸಹ ನಿಯಂತ್ರಿಸುತ್ತದೆ. ಈ ಆಹಾರಗಳಲ್ಲಿರುವ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ಹೃದಯ ಸಮಸ್ಯೆಗಳು ಹಾಗೂ ಕ್ಯಾನ್ಸರ್‌ನಂತಹ ದೀರ್ಘಕಾಲದ ಕಾಯಿಲೆಗಳಿಂದ ರಕ್ಷಿಸುತ್ತವೆ ಎಂದು ತಜ್ಞರು ತಿಳಿಸುತ್ತಾರೆ.
ದ್ವಿದಳ ಧಾನ್ಯಗಳು:ಕಿಡ್ನಿ ಬೀನ್ಸ್ ಅಥವಾ ರಾಜ್ಮಾ, ಕಪ್ಪು ಬೀನ್ಸ್ನಂತಹ ದ್ವಿದಳ ಧಾನ್ಯಗಳಲ್ಲಿ ಅಧಿಕ ಪ್ರೋಟೀನ್ ಇರುತ್ತದೆ. ಇವುಗಳನ್ನು ಆಹಾರದಲ್ಲಿ ಸೇರಿಸುವುದರಿಂದ ದೇಹಕ್ಕೆ ಸಾಕಷ್ಟು ಪ್ರೋಟೀನ್, ವಿಟಮಿನ್ ಬಿ ಮತ್ತು ಫೈಬರ್ ಲಭಿಸುತ್ತದೆ. ಈ ಆಹಾರಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ಹಾಗೂ ಉರಿಯೂತ ನಿವಾರಕ ಗುಣಗಳು ಹೃದ್ರೋಗ ಮತ್ತು ಕ್ಯಾನ್ಸರ್‌ನಂತಹ ಕಾಯಿಲೆಗಳಿಂದ ರಕ್ಷಿಸಲು ಪೂರಕವಾಗಿವೆ ಎಂದು ತಜ್ಞರು ಹೇಳುತ್ತಾರೆ.
ಡ್ರೈ ಫ್ರೂಟ್ಸ್:ಬಾದಾಮಿ, ಪಿಸ್ತಾ ಹಾಗೂ ವಾಲ್ನಟ್ನಂತಹ ಹೆಚ್ಚು ಪ್ರೋಟೀನ್ ಭರಿತ ಡ್ರೈ ಫ್ರೂಟ್ಸ್ ಪ್ರತಿದಿನ ಸೇವಿಸುವುದು ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇವು ದೇಹಕ್ಕೆ ಪ್ರೋಟೀನ್, ಕೆಲವು ಜೀವಸತ್ವಗಳು, ನಾರಿನಂಶದಂತಹ ಪೋಷಕಾಂಶಗಳನ್ನು ಒದಗಿಸುತ್ತವೆ. ಈ ಡ್ರೈ ಫ್ರೂಟ್ಸ್ ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಇವುಗಳನ್ನು ಮಿತವಾಗಿ ಸೇವಿಸಬೇಕು ಎಂದು ತಜ್ಞರು ತಿಳಿಸುತ್ತಾರೆ. 2023ರಲ್ಲಿ ನ್ಯೂಟ್ರಿಯೆಂಟ್ಸ್ ಜರ್ನಲ್‌ನಲ್ಲಿ ಪ್ರಕಟವಾದ 'ನಟ್ಸ್ ಮತ್ತು ಹೃದಯರಕ್ತನಾಳದ ಕಾಯಿಲೆಗಳ ಫಲಿತಾಂಶಗಳು: ಪುರಾವೆಗಳು ಮತ್ತು ಭವಿಷ್ಯದ ನಿರ್ದೇಶನಗಳ ವಿಮರ್ಶೆ' (Nuts and Cardiovascular Disease Outcomes: A Review of the Evidence and Future Directions) ಎಂಬ ಅಧ್ಯಯನದಲ್ಲಿ ಈ ವಿಷಯ ಬಹಿರಂಗವಾಗಿದೆ (ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ).