ಬೆಂಗಳೂರು:ಬೇಸಿಗೆ ರಜೆ ಬಂದರೆ ಸಾಕು ಜನರು ಪರಿವಾರದ ಜತೆ ಊರುಗಳಿಗೆ, ಹಲವು ಪ್ರೇಕ್ಷಣೀಯ ಸ್ಥಳಗಳತ್ತ ಪ್ರಯಾಣಿಸುತ್ತಾರೆ. ಆದರೆ, ಈ ಬಾರಿ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ತಾಪಮಾನದ ಕಾರಣ ಕೆಲವರಿಗೆ ಟ್ರಾವೆಲರ್ ಡಯೇರಿಯಾ ಸಮಸ್ಯೆ ಎದುರಾಗುವ ಸಂಭವವಿದೆ. ಇದರಿಂದ ದೂರದ ಊರಿಗೆ ಪ್ರಯಾಣಿಸಲು ಹಿಂದೆ ಮುಂದೆ ನೋಡುವಂತಾಗಿದೆ.
ಕೆಲವರಿಗೆ ಪ್ರಯಾಣಿಸುವಾಗ ಟ್ರಾವೆಲರ್ ಡಯೇರಿಯಾ ಉಂಟಾದರೆ ಇನ್ನೂ ಕೆಲವರಿಗೆ ಸ್ಥಳ ಬದಲಾವಣೆಯಾದ ಕಾರಣದಿಂದಲೂ ಈ ಖಾಯಿಲೆ ಉಂಟಾಗ ಬಹುದಾಗಿದೆ. ಇದರಿಂದ ತಮ್ಮ ತಮ್ಮ ನೆಚ್ಚಿನ ಸ್ಥಳಗಳಿಗೆ ಹೋಗಲು ರೂಪಿಸಿರುವ ಪ್ಲಾನ್‌ಗಳು ಈ ಬಾರಿ ಫ್ಲಾಪ್ ಆಗುವ ಸಂಭವ ಎದುರಾಗಲಿದೆ.
ಪ್ರಯಾಣದ ಖುಷಿಯ ಜತೆ ನಾವು ಈ ಬಾರಿ ನಮ್ಮ ಆಹಾರ ಮತ್ತು ಆರೋಗ್ಯದ ಬಗ್ಗೆಯೂ ಕೊಂಚ ಗಮನ ಹರಿಸುವುದು ಬಹುಮುಖ್ಯವಾಗಿದೆ. ಬೇರೆ ಸ್ಥಳಗಳಿಗೆ ಪ್ರಯಾಣಿಸುವಾಗ ಹೊಟ್ಟೆಗೆ ಯಾವುದೇ ಆಹಾರ ತೆಗೆದುಕೊಳ್ಳದೇ ಕೂಡ ಜನರು ಪ್ರಯಾಣಿಸುತ್ತಾರೆ. ಇದು ಸಹ ಟ್ರಾವೆಲರ್ ಡಯೇರಿಯಾಗೆ ಕಾರಣವಾಗಬಹುದಾಗಿದೆ.
ಈ ರೋಗ ಹೇಗೆ ಸಂಭವಿಸುತ್ತದೆ?:ದಿನಕ್ಕೆ ಮೂರು ಬಾರಿಗಿಂತಲೂ ಹೆಚ್ಚು ಬಾರಿ ಸಡಿಲವಾದ ನೀರಿನಂಶ ಇರುವ ಮಲ ವಿಸರ್ಜನೆ, ಹೊಟ್ಟೆ ಸೆಳೆತ, ವಾಕರಿಕೆ, ವಾಂತಿ ಮತ್ತು ಜ್ವರದಂತಹ ಸಾಮಾನ್ಯ ರೋಗ ಲಕ್ಷಣಗಳಿಂದ ಈ ಟ್ರಾವೆಲರ್ ಡಯೇರಿಯಾ ಸಂಭವಿಸಬಹುದಾಗಿದೆ. ಪ್ರಮುಖವಾಗಿ ಮಧುಮೇಹ, ದೀರ್ಘಕಾಲದ ಪಿತ್ತ ತೊಂದರೆ, ಮೂತ್ರಪಿಂಡ ಮತ್ತು ಹೃದಯದ ಖಾಯಿಲೆ ಇರುವವರಿಗೆ ಹೆಚ್ಚಾಗಿ ಬೇಸಿಗೆ ಸಮಯದಲ್ಲಿ ಜನರನ್ನು ಈ ಖಾಯಿಲೆ ಕಾಡಲಿದೆ. ಎರಡಕ್ಕಿಂತ ಹೆಚ್ಚು ದಿನ ಡಯೇರಿಯಾ ಇದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸುವ ಅಗತ್ಯತೆ ಹೆಚ್ಚಾಗಿರುತ್ತದೆ.