ನವದೆಹಲಿ: 2024ರಲ್ಲಿ ವೈಯಕ್ತಿಕ ಹಣಕಾಸು ನಿರ್ವಹಣೆಯೊಂದಿಗೆ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವು ಭಾರತೀಯರ ಪ್ರಮುಖ ಆದ್ಯತೆಗಳಾಗಿದೆ ಎಂದು ವರದಿಯೊಂದು ತಿಳಿಸಿದೆ. ಅಮೆರಿಕನ್ ಎಕ್ಸ್‌ಪ್ರೆಸ್‌ನ ಈ 'ಅಮೆಕ್ಸ್ ಟ್ರೆಂಡೆಕ್ಸ್' ವರದಿಯು ಭಾರತ, ಆಸ್ಟ್ರೇಲಿಯಾ, ಕೆನಡಾ, ಜಪಾನ್, ಮೆಕ್ಸಿಕೊ, ಯುಕೆ ಮತ್ತು ಯುಎಸ್ ಪ್ರದೇಶಗಳಲ್ಲಿ ನಡೆಸಿದ ಸಮೀಕ್ಷೆ ನಡೆಸಿ ಈ ವರದಿ ತಯಾರಿಸಲಾಗಿದೆ.
ದೈಹಿಕ ಸ್ವಾಸ್ಥ್ಯ (ಶೇ. 76ರಷ್ಟು) ಮತ್ತು ವೈಯಕ್ತಿಕ ಹಣಕಾಸು ವಿಚಾರ (ಶೇ. 69) ಭಾರತೀಯರ ಪ್ರಮುಖ ಆದ್ಯತೆಗಳಾಗಿವೆ ಎಂದು ಈ ವರದಿ ಮಾಹಿತಿ ನೀಡಿದೆ. 2023ಕ್ಕೆ ಹೋಲಿಸಿದರೆ ಈ ವರ್ಷ ಸುಮಾರು ಶೇ. 80 ಭಾರತೀಯರು ಹೆಚ್ಚು ಖರ್ಚು ಮಾಡಲು ಯೋಜಿಸಿದ್ದಾರೆ. ದೈಹಿಕ ಯೋಗಕ್ಷೇಮಕ್ಕೆ ಆದ್ಯತೆ ನೀಡುವ ವಿಚಾರದಲ್ಲಿ, ಆರೋಗ್ಯಕರ ಆಹಾರ ಸೇವನೆ (ಶೇ. 73), ಹೆಚ್ಚು ಹೊರಾಂಗಣ ಚಟುವಟಿಕೆಗಳು (ಶೇ. 63) ಮತ್ತು ಮನೆಯಲ್ಲಿ ವ್ಯಾಯಾಮಕ್ಕೆ ಸಂಬಂಧಿಸಿದ ಮಶಿನ್ಗಳನ್ನು ಇಟ್ಟುಕೊಳ್ಳುವುದು (ಶೇ. 51) ಭಾರತೀಯರ ಆದ್ಯತಾ ಪಟ್ಟಿಯಲ್ಲಿದೆ.
"ಉತ್ತಮ ಜೀವನ ನಡೆಸಲು ಮತ್ತು ಸಮಗ್ರ ಯೋಗಕ್ಷೇಮಕ್ಕೆ ಬದ್ಧರಾಗಲು ಯಾವುದು ಮುಖ್ಯ ಎಂಬುದು ಭಾರತೀಯರಿಗೆ ತಿಳಿದಿದೆ" ಎಂದು ಅಮೆರಿಕನ್ ಎಕ್ಸ್‌ಪ್ರೆಸ್ ಬ್ಯಾಂಕಿಂಗ್ ಕಾರ್ಪೊರೇಷನ್ನ (ಭಾರತ) ಸಿಇಒ ಮತ್ತು ಕಂಟ್ರಿ ಮ್ಯಾನೇಜರ್ ಸಂಜಯ್ ಖನ್ನಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಖರ್ಚು, ಉಳಿತಾಯ ಮತ್ತು ಪ್ರಯಾಣ ಸೇರಿದಂತೆ ಗ್ರಾಹಕರ ವಿಕಸನಗೊಳ್ಳುತ್ತಿರುವ ಆದ್ಯತೆಗಳನ್ನು 'ಅಮೆಕ್ಸ್ ಟ್ರೆಂಡೆಕ್ಸ್' ಸ್ಪಷ್ಟವಾಗಿ ತಿಳಿಸಿದೆ ಎಂದು ಹೇಳಿದರು.
ಇದಲ್ಲದೇ, ಉದ್ಯೋಗದಲ್ಲಿರುವ ಭಾರತೀಯರು ತಮ್ಮ ಮಾನಸಿಕ ಆರೋಗ್ಯದ ಮೇಲೂ ಗಮನ ಕೇಂದ್ರೀಕರಿಸುತ್ತಿದ್ದಾರೆ. ವರ್ಕ್ - ಲೈಫ್ ಬ್ಯಾಲೆನ್ಸ್, ತಮಗೆ ಹೊಂದಿಕೆಯಾಗುಂತಹ ಕೆಲಸವನ್ನು ಆಯ್ದುಕೊಳ್ಳುವುದು ಮತ್ತು ಸಪೋರ್ಟಿವ್ ವರ್ಕ್ ಎನ್ವಿರಾನ್ಮೆಂಟ್ - ಪ್ರಮುಖ ಅಂಶಗಳಾಗಿದೆ.
ಹಿಂದಿನ ವರ್ಷಗಳಿಗೆ ಹೋಲಿಸಿದರೆ ಸುಮಾರು ಶೇ. 80 ರಷ್ಟು ಭಾರತೀಯರು ಕೆಲಸದಲ್ಲಿ ತಮ್ಮ ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ವರ್ಕ್-ಲೈಫ್ ಬ್ಲ್ಯಾಲೆನ್ಸ್ - (ಶೇ. 67), ತಮಗೆ ಹೊಂದಿಕೆಯಾಗುಂತಹ ಕೆಲಸವನ್ನು ಆಯ್ದುಕೊಳ್ಳುವುದು - (ಶೇ.61) ಮತ್ತು ಸಹಾಯಕ ಕೆಲಸದ ವಾತಾವರಣ - (ಶೇ.60) ಕಡೆ ಗಮನ ಕೇಂದ್ರೀಕರಿಸುತ್ತಿದ್ದಾರೆ.