ನವದೆಹಲಿ: ಭಾರತದಲ್ಲಿ 18ರಿಂದ 24 ವರ್ಷದ ಶೇ.46.96ರಷ್ಟು ಯುವ ಜನತೆ ತಂಬಾಕು ಸೇವನೆ ತ್ಯಜಿಸಿದ್ದಾರೆ ಎಂದು ವರದಿಯಾಗಿದೆ. ಸರ್ಕಾರದ ರಾಷ್ಟ್ರೀಯ ತಂಬಾಕು ಕ್ವಿಟ್ಲೈನ್ ಸೇವೆಗೆ (ಎನ್ಟಿಕ್ಯೂಎಲ್ಎಸ್) ಬಂದ ಕರೆಗಳ ಆಧಾರದಲ್ಲಿ ವಲ್ಲಭಭಾಯಿ ಪಟೇಲ್ ಚೆಸ್ಟ್ ಇನ್ಸುಟಿಟ್ಯೂಟ್ (ವಿಪಿಸಿಐ) ಈ ಸಮೀಕ್ಷೆ ನಡೆಸಿದೆ.
ವಿಶ್ವ ತಂಬಾಕುರಹಿತ ದಿನವನ್ನು ಪ್ರತೀ ವರ್ಷ ಮೇ 31ರಂದು ಆಚರಿಸಲಾಗುತ್ತದೆ. ಎನ್ಟಿ ಕ್ಯೂಎಲ್‌ಎಸ್ ದತ್ತಾಂಶದ ಮೇಲೆ ವಿಪಿಸಿಐ ನಡೆಸಿದ ಸಮೀಕ್ಷೆಯಲ್ಲಿ ತಂಬಾಕು ಚಟದಿಂದ ದೂರವಾಗುವ ಹೆಲ್ಪ್ಲೈನ್ಗೆ 4,77,585 ನೋಂದಾಯಿತ ಕರೆಗಳು ಬಂದಿದ್ದು, 1,44,938 ಮಂದಿ ತಂಬಾಕು ತ್ಯಜಿಸುವುದಾಗಿ ತಿಳಿಸಿದ್ದಾರೆ. 2016ರ ಮೇ ತಿಂಗಳಿಂದ 2024ರ ನಡುವೆ ಒಟ್ಟು 8.2 ಮಿಲಿಯನ್ ಕರೆಗಳು ಇಂಟರ್ಆಕ್ಟೀವ್ ವಾಯ್ಸ್ ರೆಸ್ಪಾನ್ಸ್ ಮೂಲಕ ಬಂದಿದೆ.
ಎನ್ಟಿಕ್ಯೂಎಲ್ಎಸ್ಗೆ ಶೇ.46.96ರಷ್ಟು ಕರೆಗಳು 18ರಿಂದ 24 ವರ್ಷದವರಿಂದ ಬಂದಿದೆ. ಇವರೆಲ್ಲ 12ನೇ ದರ್ಜೆಯ ಶಿಕ್ಷಣ ಹೊಂದಿದ್ದು, ತಂಬಾಕು ಪದಾರ್ಥ ತ್ಯಜಿಸಿದ್ದಾರೆ.
ತಂಬಾಕು ತ್ಯಜಿಸುವಲ್ಲಿ ಯುಪಿ ಮುಂದು: ರಾಜ್ಯವಾರು ಗಮನಿಸಿದಾಗ, ಉತ್ತರ ಪ್ರದೇಶದ ಯುವ ಜನತೆ ತಂಬಾಕು ತ್ಯಜಿಸುವಲ್ಲಿ ಮುಂದಿದ್ದಾರೆ. ಯುಪಿಯಲ್ಲಿ ಶೇ.29.68ರಷ್ಟು ಮಂದಿ ತಂಬಾಕು ತ್ಯಜಿಸಿದ್ದಾರೆ. ಇವರಲ್ಲಿ ಶೇ.77.74ರಷ್ಟು ಮಂದಿ ಆಲ್ಕೋಹಾಲ್ ಸೇವನೆ ಇತಿಹಾಸ ಹೊಂದಿಲ್ಲ.
ದೇಶದಾದ್ಯಂತ ಜನರು ತಂಬಾಕು ಚಟದಿಂದ ಮುಕ್ತಿ ಹೊಂದಲು ಎನ್ಟಿಕ್ಯೂಎಲ್ಎಸ್ ಉಚಿತ, ಗೌಪ್ಯ ಸಮಾಲೋಚನೆ ಮತ್ತು ಮಾರ್ಗದರ್ಶನ ಒದಗಿಸುತ್ತದೆ. ಈ ಮೂಲಕ ಅವರ ಆರೋಗ್ಯದ ಜವಾಬ್ದಾರಿ ತೆಗೆದುಕೊಳ್ಳುವ ಮೂಲಕ ದೇಶವನ್ನು ಸಬಲಗೊಳಿಸುತ್ತಿದೆ ಎಂದು ವಲ್ಲಭಬಾಯಿ ಚೆಸ್ಟ್ ಇನ್ಸುಟಿಟ್ಯೂಟ್ನ ನಿರ್ದೇಶಕ ಡಾ.ರಾಜ್ ಕುಮಾರ್ ತಿಳಿಸಿದ್ದಾರೆ.
ತಂಬಾಕು ತ್ಯಜಿಸುವುದು ಕೇವಲ ಇಚ್ಛಾಶಕ್ತಿಯನ್ನು ಮಾತ್ರ ಅವಲಂಬಿಸಿಲ್ಲ. ಇದು ಮಾನಸಿಕ ಮತ್ತು ನಡುವಳಿಕೆ ಅಂಶಗಳನ್ನೂ ತಿಳಿಸುತ್ತದೆ. ಕಳೆದ 23 ವರ್ಷಗಳಲ್ಲಿ ಸಂಸ್ಥೆಯು ಹಲವು ಸಾರ್ವಜನಿಕ ಜಾಗೃತಿ ಕಾರ್ಯಕ್ರಮ, ತಂಬಾಕು ವಿರೋಧಿ ಅಭಿಯಾನ ಮತ್ತು ಸೆಮಿನಾರ್‌ಗಳನ್ನು ಆಯೋಜಿಸಿದೆ ಎಂದು ಅವರು ಹೇಳಿದರು. (ಐಎಎನ್ಎಸ್)
ಇದನ್ನೂ ಓದಿ: ಮಾನಸಿಕ ಆರೋಗ್ಯ ಸವಾಲುಗಳಿಗೆ ಸಂಜೀವಿನಿ Tele MANASಗೆ ಪ್ರತಿನಿತ್ಯ 3,500 ಕರೆ