ಆಫ್ರಿಕಾದಲ್ಲಿ ವೇಗವಾಗಿ ಹರಡುತ್ತಿರುವ 'ಎಂಪಾಕ್ಸ್' ಅನ್ನು ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಯಾಗಿ ವಿಶ್ವ ಆರೋಗ್ಯ ಸಂಸ್ಥೆ(WHO) ಘೋಷಿಸಿದೆ. ಈ ವೈರಸ್ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹರಡಬಹುದು ಎಂದು ಎಚ್ಚರಿಸಿದೆ.
ಆಫ್ರಿಕಾದಲ್ಲಿ ಇದುವರೆಗೆ ಎಂಪಾಕ್ಸ್ನ 14 ಸಾವಿರ ಪ್ರಕರಣಗಳು ಕಂಡುಬಂದಿವೆ. 524 ಮಂದಿ ಸಾವನ್ನಪ್ಪಿದ್ದಾರೆ. ಕಾಂಗೋದಲ್ಲಿ ಶೇ 96ರಷ್ಟು ಸಾವು ವರದಿಯಾಗಿದೆ. ಈ ಹೊಸ ಸೋಂಕು ಸುಲಭವಾಗಿ ಹರಡಬಹುದು ಎಂಬ ಆತಂಕ ವಿಜ್ಞಾನಿಗಳದ್ದು.
ಏನಿದು ಎಂಪಾಕ್ಸ್?: ಎಂಪಾಕ್ಸ್ ಸಾಮಾನ್ಯವಾಗಿ ಮಂಕಿಪಾಕ್ಸ್ ಎಂದು ಗುರುತಿಸಿಕೊಂಡಿದೆ. ಮೊದಲ ಬಾರಿಗೆ 1958ರಲ್ಲಿ ಇದನ್ನು ವಿಜ್ಞಾನಿಗಳು ಮಂಗಗಳಲ್ಲಿ ಸಿಡುಬಿನಂತಹ ರೋಗವೆಂದು ಪತ್ತೆ ಹಚ್ಚಿದ್ದರು. ಅಂದಿನಿಂದ ಇಂದಿನವರೆಗೆ ಈ ರೋಗ ಕೇಂದ್ರ ಮತ್ತು ಪಶ್ಚಿಮ ಆಫ್ರಿಕಾ ದೇಶಗಳಲ್ಲಿ ಕಂಡು ಬರುತ್ತಿದೆ. ಈ ಭಾಗದ ಜನರು ಪ್ರಾಣಿಗಳೊಂದಿಗೆ ಹೆಚ್ಚು ಸಂಪರ್ಕದಲ್ಲಿರುವುದು ಇದಕ್ಕೆ ಪ್ರಮುಖ ಕಾರಣವೆಂದು ತಿಳಿದುಬಂದಿದೆ.
ರೋಗ ಲಕ್ಷಣಗಳೇನು?: 2022ರಲ್ಲಿ ಲೈಂಗಿಕತೆಯ ಮೂಲಕ ಆರು ಜನರಿಗೆ ಹರಡಿ, ಜಗತ್ತಿನ 70 ದೇಶಗಳಲ್ಲೂ ಸೋಂಕು ಕಂಡುಬಂದಿತ್ತು. ಎಂಪಾಕ್ಸ್ ಸ್ಮಾಲ್ಪಾಕ್ಸ್ನಂತೆ ಒಂದೇ ಕುಟುಂಬಕ್ಕೆ ಸೇರಿದ ರೋಗಾಣು. ಇದು ಸೌಮ್ಯ ಸ್ವಭಾವದ ಜ್ವರ, ಚಳಿ ಮತ್ತು ಮೈಕೈನೋವಿನ ಲಕ್ಷಣಗಳನ್ನು ಹೊಂದಿದೆ. ಗಂಭೀರ ಸ್ವರೂಪದಲ್ಲಿ ಇದು ರೋಗಿಗಳಲ್ಲಿ ಜ್ವರ ಮತ್ತು ದುಗ್ಧರಸ ಗ್ರಂಥಿಗಳ ಹಿಗ್ಗುವಿಕೆಯ ಮೂಲಕ ಕಾಣಿಸಿಕೊಳ್ಳುತ್ತದೆ. 1-5 ದಿನಗಳ ನಂತರ ರೋಗಿಯ ಮುಖ, ಅಂಗೈಗಳಲ್ಲಿ ದದ್ದುಗಳು ಕಾಣಿಸಬಹುದು.
ಆಫ್ರಿಕಾದಲ್ಲಿ ಹೆಚ್ಚುತ್ತಿರುವ ಪ್ರಕರಣಗಳು: ಕಳೆದೊಂದು ವಾರದಿಂದ ಆಫ್ರಿಕಾದಲ್ಲಿ ಸೋಂಕು ಉಲ್ಬಣಗೊಳ್ಳುತ್ತಿದೆ ಎಂದು ಆಫ್ರಿಕಾ ಸಿಡಿಸಿ ವರದಿ ಮಾಡಿದೆ. ಆಫ್ರಿಕಾದ 13 ದೇಶದಲ್ಲಿ ಪ್ರಕರಣ ಪತ್ತೆಯಾಗಿದೆ. ಇದರ ಸಂಖ್ಯೆ ಶೇ160ರಷ್ಟು ಹೆಚ್ಚಾಗಿದ್ದು ಮತ್ತು ಸಾವಿನ ಸಂಖ್ಯೆ ಶೇ 19ರಷ್ಟಿದೆ. ಈ ವರ್ಷಾರಂಭದಲ್ಲಿ ಕಾಂಗೊಲೀಸ್ನಲ್ಲಿ ಹೊಸ ಬಗೆಯ ಎಂಪಾಕ್ಸ್ ಪ್ರಕರಣ ಪತ್ತೆಯಾಗಿದ್ದು, ಇದು ಸುಲಭವಾಗಿ ಪ್ರಸರಣವಾಗುವ ಮತ್ತು ಶೇ 10ರಷ್ಟು ಸಾವಿಗೆ ಕಾರಣವಾಗುತ್ತದೆ.
ಕಾಂಗೋದಲ್ಲಿ ಸ್ಥಳೀಯವಾಗಿದ್ದ ಈ ರೋಗ ಬುರುಂಡಿ, ಕೀನ್ಯಾ, ರುವಾಂಡ ಮತ್ತು ಉಗಾಂಡದಲ್ಲಿ ಪತ್ತೆಯಾಗಿದೆ. ಆಫ್ರಿಕಾದ ಹೊರತಾಗಿಯೂ ಇದು ಹರಡುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ. ಐವರಿ ಕೋಸ್ಟ್ ಮತ್ತು ದಕ್ಷಿಣ ಆಫ್ರಿಕಾದಲ್ಲಿವಿಭಿನ್ನವಾಗಿ ಮತ್ತು ಕಡಿಮೆ ಅಪಾಯದ ವಿಧವಾಗಿ ಕಂಡುಬಂದಿತ್ತು. 2022ರಲ್ಲಿ ಇದು ಜಗತ್ತಿನೆಲ್ಲೆಡೆ ಹರಡಿದೆ.
ತಡೆ ಹೇಗೆ?:2022ರಲ್ಲಿ 12ಕ್ಕೂ ಹೆಚ್ಚು ದೇಶದಲ್ಲಿ ರೋಗ ಪತ್ತೆಯಾದಾಗ ಲಸಿಕೆ ಬಳಸಿ ಚಿಕಿತ್ಸೆ ನೀಡುವ ಜೊತೆಗೆ ಶಟ್ಡೌನ್ನಂತಹ ಕ್ರಮವನ್ನೂ ಶ್ರೀಮಂತ ರಾಷ್ಟ್ರಗಳು ಮಾಡಿದ್ದವು. ಅಲ್ಲದೇ, ರೋಗದ ಅಪಾಯಕಾರಿ ನಡವಳಿಕೆಗಳ ಕುರಿತು ಜನರಲ್ಲಿ ಅರಿವು ಮೂಡಿಸಲಾಗಿತ್ತು. ಆಫ್ರಿಕಾದಲ್ಲಿ ಲಸಿಕೆ ಅಥವಾ ಚಿಕಿತ್ಸೆಗಳು ಅಗತ್ಯ ಪ್ರಮಾಣದಲ್ಲಿಲ್ಲ. ಇಮ್ಯೂನೈಸೇಷನ್ಗಳು ಇದಕ್ಕೆ ಸಹಾಯವಾಗಲಿದೆ.
ಲಸಿಕೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಮಾಡುವುದರಿಂದ ಅಪಾಯ ತಡೆಯಬಹುದು. ಕಾಂಗೋ ಇದೀಗ ದಾನಿಗಳ ಜೊತೆ ಮಾತುಕತೆ ನಡೆಸಿದ್ದು, ಲಸಿಕೆ ದಾನ ಮತ್ತು ಆರ್ಥಿಕ ಸಹಾಯದ ಕುರಿತು ಬ್ರಿಟನ್ ಮತ್ತು ಅಮೆರಿಕದೊಂದಿಗೆ ಮಾತನಾಡಿದೆ. ವಿಶ್ವ ಆರೋಗ್ಯ ಸಂಸ್ಥೆ ಆಫ್ರಿಕಾದಲ್ಲಿ ಎಂಪಾಕ್ಸ್ ತುರ್ತು ನಿಧಿ ಬೆಂಬಲಕ್ಕೆ 1.45 ಮಿಲಿಯನ್ ಡಾಲರ್ ಅನ್ನು ಈಗಾಗಲೇ ಬಿಡುಗಡೆ ಮಾಡಿದೆ. ಆದರೆ, ಆರಂಭಿಕ ಹಂತದಲ್ಲಿ ಇದಕ್ಕೆ 15 ಮಿಲಿಯನ್ ಡಾಲರ್ ಬೇಕಾಗಿದೆ ಎಂದು ಅಂದಾಜಿಸಿದೆ.
ಇದನ್ನೂ ಓದಿ: ಆಫ್ರಿಕಾ ದೇಶಗಳಲ್ಲಿ ಮಂಕಿಫಾಕ್ಸ್ ಉಲ್ಬಣ: ಜಾಗತಿಕ ಆರೋಗ್ಯ ತುರ್ತುಸ್ಥಿತಿ ಘೋಷಿಸಿದ