ಮಂಗಳೂರು: ಮೂಳೆ ಸವೆತ ಮತ್ತು ಮಂಡಿನೋವು ಮನುಷ್ಯನಿಗೆ ಕಾಡುವ ಸಾಮಾನ್ಯ ಸಮಸ್ಯೆ. ಮನುಷ್ಯನಿಗೆ ವಯಸ್ಸಾದಂತೆ ಮೂಳೆ ಸವೆತ ಮತ್ತು ಮಂಡಿ ನೋವು ಕಾಣಿಸಿಕೊಳ್ಳುತ್ತದೆ. ಮನುಷ್ಯನಿಗೆ ಕಾಡುವ ಈ ಸಮಸ್ಯೆಗೆ ಪರಿಹಾರಗಳೇನು ಎಂಬ ಬಗ್ಗೆ ವಿಶೇಷ ವರದಿ ಇಲ್ಲಿದೆ.
ಮೂಳೆ ಸವೆತ ಮತ್ತು ಮಂಡಿನೋವು ವಯಸ್ಸಾದವರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆಯಾಗಿದೆ. ಇದು ಮೂಳೆಗಳ ನಡುವೆ ಉಜ್ಜುವಿಕೆಗೆ ಕಾರಣವಾಗಿ ತೀವ್ರವಾದ ನೋವನ್ನು ಉಂಟುಮಾಡುತ್ತದೆ. ಮೂಳೆ ಸವೆತದಿಂದ ಹೆಚ್ಚಾಗಿ ಮಂಡಿಯಲ್ಲಿ ಸಮಸ್ಯೆ ಕಂಡುಬರುತ್ತದೆ.
ಮಂಡಿನೋವಿಗೆ ಕಾರಣಗಳು: ವಯಸ್ಸಾದಂತೆ ಮಂಡಿನೋವು ಕಾಣಿಸುವುದು ಸಾಮಾನ್ಯ. ಅಧಿಕ ತೂಕವು ಮೊಣಕಾಲುಗಳ ಮೇಲೆ ಹೆಚ್ಚಿನ ಒತ್ತಡವನ್ನು ಹೇರುತ್ತದೆ. ಮೊಣಕಾಲಿನ ಗಾಯಗಳು ಮಂಡಿನೋವಿಗೆ ಕಾರಣವಾಗಬಹುದು. ಕೆಲವೊಮ್ಮೆ ಜನರು ಮೊಣಕಾಲಿನ ಸಮಸ್ಯೆಯೊಂದಿಗೆ ಜನಿಸುತ್ತಾರೆ, ಇದು ಮೂಳೆ ಸವೆತಕ್ಕೆ ಕಾರಣವಾಗಬಹುದು. ಕೆಲವು ಕೆಲಸಗಳು ಅಥವಾ ಕ್ರೀಡೆಗಳು ಮೊಣಕಾಲಿನ ಮೇಲೆ ಹೆಚ್ಚಿನ ಒತ್ತಡವನ್ನು ಹೇರುತ್ತವೆ ಇದರಿಂದ ಮಂಡಿನೋವು ಕಾಣಿಸಿಕೊಳ್ಳುತ್ತದೆ.
ಮಂಡಿನೋವಿನ ಲಕ್ಷಣಗಳು: ಮೊಣಕಾಲಿನಲ್ಲಿ ನೋವು ಊತ ಬೆಳಗ್ಗೆ ಎದ್ದಾಗ ಅಥವಾ ದೀರ್ಘಕಾಲ ಒಂದೇ ಸ್ಥಾನದಲ್ಲಿ ಕುಳಿತಾಗ ನೋವು ಹೆಚ್ಚಾಗುವುದು ಮೊಣಕಾಲನ್ನು ಬಾಗಿಸುವಾಗ ಅಥವಾ ನೇರಗೊಳಿಸುವಾಗ ನೋವುಂಟಾಗುವುದು.
ಮಂಡಿನೋವಿಗೆ ಪರಿಹಾರಗಳೇನು?: ಮೂಳೆ ಸವೆತ ಮತ್ತು ಮಂಡಿನೋವಿಗೆ ಸಂಬಂಧಿಸಿದಂತೆ ಈಟಿವಿ ಭಾರತ್ ಜೊತೆಗೆ ಮಾತನಾಡಿದ ಖ್ಯಾತ ಮೂಳೆ ಶಸ್ತ್ರಚಿಕಿತ್ಸಕ ಡಾ ಶಾಂತರಾಮ ಶೆಟ್ಟಿ, ಒಬ್ಬ ವ್ಯಕ್ತಿ ಸರಾಸರಿ 60 ವರ್ಷ ಬದುಕುತ್ತಾನೆ. ವಯಸ್ಸು ಹೆಚ್ಚಾಗುತ್ತಾ ಹೋಗುವಾಗ ಮೂಳೆ, ಮಾಂಸ ಖಂಡಗಳು, ಮೆದುಳಿನ ಶಕ್ತಿ ಕಡಿಮೆಯಾಗುತ್ತದೆ. ಅದರಂತೆ ಮೂಳೆಯ ಶಕ್ತಿ ಕಡಿಮೆಯಾಗುತ್ತದೆ. ಅದರಲ್ಲಿ ಮೊಣ ಗಂಟಿನ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಎಂದು ಮಾಹಿತಿ ನೀಡಿದರು.
ಮೊಣ ಗಂಟು ಪ್ರಾಯವಾಗುತ್ತಿದ್ದಂತೆ ಊನವಾಗಿ ಬಗ್ಗಿಹೋಗುತ್ತದೆ. ಅದರ ಶಕ್ತಿ ಕುಂದುವ ಜೊತೆಗೆ ನಿಯಂತ್ರಣ ತಪ್ಪುತ್ತದೆ. ಇದನ್ನು ತಡೆಗಟ್ಟಲು ಹೆಚ್ಚು ಬೊಜ್ಜನ್ನು ನಿಯಂತ್ರಣ ಮಾಡಬೇಕು. 40 ಮೀರಿದವರು ಪ್ರತಿದಿನ ಸರಿಯಾದ ವ್ಯಾಯಾಮ ಮಾಡುವುದು ಮತ್ತು ಸರಿಯಾದ ಪೌಷ್ಠಿಕ ಆಹಾರವನ್ನು ಸೇವಿಸುವುದನ್ನು ಮಾಡಬೇಕು ಎಂದು ಸಲಹೆ ನೀಡಿದರು.