ಬರ್ಲಿನ್, ಜರ್ಮನಿ: ದೀರ್ಘಕಾಲದ ಮತ್ತು ಅಧಿಕ ಸಮಯದ ಒತ್ತಡಗಳು ವ್ಯಕ್ತಿಯೊಬ್ಬನನ್ನು ಮಾನಸಿಕ, ಭಾವನಾತ್ಮಕ ಮತ್ತು ದೈಹಿಕವಾಗಿ ಬಳಲುವಂತೆ ಮಾಡುತ್ತದೆ. ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಬರ್ನ್ಔಟ್ ಎಂದು ಕೂಡ ಕರೆಯುತ್ತೇವೆ. ಇಂದಿನ ವೇಗದ ಜಗತ್ತಿನಲ್ಲಿ ಈ ರೀತಿಯ ಬರ್ನೌಟ್ನಿಂದ ಅನೇಕ ಮಂದಿ ಬಳಲುತ್ತಿರುತ್ತಾರೆ. ಅನೇಕ ಬಾರಿ ನಮ್ಮ ಸಂಬಂಧಿಕರು ಮತ್ತು ಸ್ನೇಹಿತರು ಇದರಿಂದಾಗಿ ಒಳಗೊಳಗೆ ಕುಗ್ಗುತ್ತಿರುತ್ತಾರೆ. ಈ ದೀರ್ಘವಾದ ಒತ್ತಡ ಅವರ ಯೋಗಕ್ಷೇಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.
ಇಂತಹ ಪರಿಸ್ಥಿತಿಯಲ್ಲಿ ಮೊದಲಿಗೆ ಅವರಿಗೆ ವೃತ್ತಿಪರರ ಸಹಾಯ ಬೇಕಾಗುತ್ತದೆ. ಅವರ ಸಮಸ್ಯೆ ಪತ್ತೆ ಮಾಡುವ ಅವಶ್ಯಕತೆಯೂ ಇರುತ್ತದೆ. ಇದರ ಜೊತೆಗೆ ಅವರಿಗೆ ಸಂಬಂಧಿಕರು ಮತ್ತು ಸ್ನೇಹಿತರಿಂದಲೂ ಪರಿಸ್ಥಿತಿ ನಿಭಾಯಿಸಲು ಬೆಂಬಲ ಸಿಗುವುದು ಅವಶ್ಯಕವಾಗಿದೆ. ಇದರಿಂದ ಸಮಸ್ಯೆಯನ್ನು ಸುಲಭವಾಗಿ ನಿವಾರಣೆ ಮಾಡಬಹುದಾಗಿದೆ.
ಮತ್ತೊಂದು ಪ್ರಮುಖ ಅಂಶ ಎಂದರೆ, ನಿಮ್ಮ ಸುತ್ತಮುತ್ತಲಿನ ಆತ್ಮೀಯರು ಈ ರೀತಿಯ ಒತ್ತಡಗಳಿಂದ ಬಳಲುತ್ತಿದ್ದಾರಾ ಎಂಬುದನ್ನು ಅರ್ಥೈಸಿಕೊಳ್ಳಬೇಕಿದೆ ಎಂದು ಸೈಕೊಥೇರಪಿ ಮತ್ತು ಸೈಕೋಸೊಮ್ಯಾಟಿಕ್ ಮೆಡಿಸಿನ್ನ ಮನೋವೈದ್ಯರಾಗಿರುವ ಪೆಟ್ರಾ ಬೆಸ್ಕೊನರ್ ತಿಳಿಸಿದ್ದಾರೆ. ಈ ಅನಾರೋಗ್ಯ ಪರಿಸ್ಥಿತಿಗಳ ಕುರಿತು ಸಂಬಂಧಿಕರು ಶಿಕ್ಷಣ ಪಡೆದು, ತಮಗೂ ಕೂಡ ವೃತ್ತಿಪರರಿಂದ ಸಹಾಯ ಪಡೆದುಕೊಳ್ಳಬೇಕು ಎನ್ನುತ್ತಾರೆ.