ನವದೆಹಲಿ: ದಪ್ಪಗಿರುವವರ ಬಗ್ಗೆ ನಮ್ಮ ದೃಷ್ಟಿಕೋನವನ್ನು ಬದಲಾಯಿಸುವ ಸಮಯ ಬಂದಿದೆ ಎಂದು ಭಾರತೀಯ ಮೂಲದ ಶಿಕ್ಷಣ ತಜ್ಞೆ ಸೋಮವಾರ ಹೇಳಿದ್ದಾರೆ. ದಪ್ಪಗಿರುವವರ ವಿರುದ್ಧ ನಾವು ವ್ಯಾಪಕವಾದ ಪೂರ್ವಗ್ರಹಪೀಡಿತ ದೃಷ್ಟಿಕೋನವನ್ನು ಹೊಂದಿದ್ದೇವೆ ಮತ್ತು ಸ್ಥೂಲಕಾಯತೆ ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಸಾರ್ವಜನಿಕ ಆರೋಗ್ಯ ಯೋಜನೆಗಳು ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸಿವೆ ಎಂದು ಅಮೆರಿಕದ ಅಲಬಾಮಾ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದ ಸಹಾಯಕ ಪ್ರಾಧ್ಯಾಪಕಿ ಆಗಿರುವ ರೇಖಾ ನಾಥ್ ಹೇಳಿದ್ದಾರೆ.
'ವೈ ಇಟ್ಸ್ ಓಕೆ ಟು ಬಿ ಫ್ಯಾಟ್' ಹೆಸರಿನ ತಮ್ಮ ಕೃತಿಯಲ್ಲಿ, ಸಮಾಜವು ದಪ್ಪಗಿರುವವರನ್ನು ನೋಡುವ ದೃಷ್ಟಿಕೋನದಲ್ಲಿ ಸಂಪೂರ್ಣ ಬದಲಾವಣೆಯಾಗಬೇಕಿದೆ ಎಂದು ವಾದಿಸಿದ್ದಾರೆ. "ದಪ್ಪಗಿರುವುದು ಆಕರ್ಷಕವಲ್ಲ ಎಂದು ನೋಡಲಾಗುತ್ತದೆ. ಕೊಬ್ಬನ್ನು ನಾವು ದೌರ್ಬಲ್ಯ, ದುರಾಸೆ, ಸೋಮಾರಿತನದ ಸಂಕೇತವಾಗಿ ನೋಡುತ್ತೇವೆ" ಎಂದು ಅವರು ಬರೆದಿದ್ದಾರೆ.
"ತೆಳ್ಳಗಿರುವುದನ್ನು ನಾವು ಆರೋಗ್ಯ, ಫಿಟ್ನೆಸ್, ಸೌಂದರ್ಯ ಮತ್ತು ಶಿಸ್ತಿನೊಂದಿಗೆ ಜೋಡಿಸಿದ್ದೇವೆ ಮತ್ತು ತೆಳ್ಳಗಾಗುವುದನ್ನು ನೈತಿಕ ಅನ್ವೇಷಣೆಯನ್ನಾಗಿ ಮಾಡಿದ್ದೇವೆ. ದಪ್ಪಗಾಗುವುದನ್ನು ತಪ್ಪಿಸಲು 'ಸರಿಯಾದ' ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ನೋಡಲಾಗುತ್ತದೆ" ಎಂದು ನಾಥ್ ಹೇಳಿದ್ದಾರೆ.
ಪುಸ್ತಕದಲ್ಲಿ ಉಲ್ಲೇಖಿಸಲಾದ ಸಂಶೋಧನೆಯ ಪ್ರಕಾರ, ಕಳೆದ 50 ವರ್ಷಗಳಲ್ಲಿ ಜಾಗತಿಕ ಸ್ಥೂಲಕಾಯತೆಯ ಪ್ರಮಾಣವು ಮೂರು ಪಟ್ಟು ಹೆಚ್ಚಾಗಿದೆ. ಆದರೆ, ವಿಶ್ವ ಆರೋಗ್ಯ ಸಂಸ್ಥೆ ಬಾಲ್ಯದ ಸ್ಥೂಲಕಾಯತೆಯನ್ನು 21 ನೇ ಶತಮಾನದ ಅತ್ಯಂತ ಗಂಭೀರ ಜಾಗತಿಕ ಸಾರ್ವಜನಿಕ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಿದೆ.