Intermittent Fasting and Hair Growth:'ಮಧ್ಯಂತರ ಉಪವಾಸ'ವು ಈಗ ಆಹಾರ ವಿಭಾಗದಲ್ಲಿ ಟ್ರೆಂಡಿಂಗ್ ಆಗಿದೆ. ಒಂದು ಹೊತ್ತು ಮಾತ್ರ ಆಹಾರ ಸೇವಿಸಿದ ನಂತರ ದಿನವೀಡಿ ಉಪವಾಸ ಮಾಡುತ್ತಾರೆ. ಈ ಉಪವಾಸವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ ಹಾಗೂ ಕೊಬ್ಬು ಕರಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ಮಧ್ಯಂತರ ಉಪವಾಸವು ಚಯಾಪಚಯವನ್ನು ಸುಧಾರಿಸಲು ಹಾಗೂ ತೂಕವನ್ನು ಕಡಿಮೆ ಮಾಡಲು ಬಹಳ ಮುಖ್ಯವಾಗಿದೆ ಎಂದು ಅವರು ಹೇಳುತ್ತಾರೆ. ಈ ಉಪವಾಸ ವಿಧಾನದ ಅನೇಕ ಆರೋಗ್ಯ ಪ್ರಯೋಜನಗಳ ಹೊರತಾಗಿಯೂ, ಇತ್ತೀಚಿನ ಅಧ್ಯಯನವು ಕೂದಲಿನ ಬೆಳವಣಿಗೆಯ ಮೇಲೆ ಕೆಲವು ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ಬಹಿರಂಗಪಡಿಸಿದೆ.
ಕೂದಲು ಬೆಳವಣಿಗೆ ನಿಧಾನ:ಮಧ್ಯಂತರ ಉಪವಾಸವು ತೂಕ ನಷ್ಟದಂತಹ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದರೂ, ಕೆಲವು ನಕಾರಾತ್ಮಕ ಪರಿಣಾಮಗಳಿವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಮಧ್ಯಂತರ ಉಪವಾಸವು ಕೂದಲು ಕಿರುಚೀಲಗಳ ಕಾಂಡಕೋಶಗಳ ಮೇಲೆ ಆಕ್ಸಿಡೇಟಿವ್ ಒತ್ತಡ ಹೆಚ್ಚಿಸುತ್ತದೆ ಎಂದು ತಿಳಿದಿದೆ. ಇದು ಕೂದಲಿನ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ.
ಈ ಅಧ್ಯಯನವನ್ನು ಜರ್ನಲ್ ಸೆಲ್ನಲ್ಲಿ ಪ್ರಕಟಿಸಲಾಗಿದೆ. ಸಂಶೋಧನೆಯ ಭಾಗವಾಗಿ, ಮಧ್ಯಂತರ ಉಪವಾಸಕ್ಕೆ ಒಳಗಾದ ಇಲಿಗಳಲ್ಲಿ ಕೂದಲಿನ ಬೆಳವಣಿಗೆಯು ಗಣನೀಯವಾಗಿ ನಿಧಾನವಾಗಿದೆ ಎಂಬ ವಿಷಯ ಬಹಿರಂಗವಾಗಿದೆ. ಮಾನವರ ಮೇಲೆ ನಡೆಸಿದ ಕ್ಲಿನಿಕಲ್ ಪ್ರಯೋಗಗಳಲ್ಲಿ ಈ ಪರಿಣಾಮವು ಸ್ವಲ್ಪ ಕಡಿಮೆಯಾಗಿದೆ ಎನ್ನುವುದು ತಿಳಿದುಬಂದಿದೆ. (ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
ಉಪವಾಸದ ಸಮಯದಲ್ಲಿ, ಕೂದಲಿನ ಕಿರುಚೀಲಗಳ ಕಾಂಡಕೋಶಗಳಲ್ಲಿ ಕೊಬ್ಬಿನಾಮ್ಲಗಳು ಸಂಗ್ರಹವಾಗುತ್ತವೆ. ಇದು ಆಕ್ಸಿಡೇಟಿವ್ ಒತ್ತಡವನ್ನು ಹೆಚ್ಚಿಸುತ್ತದೆ. ಇದು ಜೀವಕೋಶದ ಸಾವಿಗೆ ಕಾರಣವಾಗುತ್ತದೆ ಎಂದು ಸಂಶೋಧಕರು ಅಧ್ಯಯನದಿಂದ ಕಂಡುಕೊಂಡಿದ್ದಾರೆ. ಆದರೆ, ಈ ಕಾರಣಕ್ಕಾಗಿಯೇ ಉಪವಾಸವನ್ನು ಬದಿಗಿಡುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.