ಬೆಂಗಳೂರು: ಬದಲಾಗುತ್ತಿರುವ ಹವಾಮಾನದಿಂದಾಗಿ ರಾಜ್ಯದಲ್ಲಿ ಡೆಂಗ್ಯೂ ಜ್ವರ ಹೆಚ್ಚಳವಾಗಿದೆ. ಈ ವರ್ಷ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಶೇ. 59 ರಷ್ಟು ಹೆಚ್ಚಾಗಿದ್ದು, ಬಿಟ್ಟು, ಬಿಟ್ಟು ಬರುತ್ತಿರುವ ಮಳೆ, ಜನ ಸ್ವಚ್ಛತೆ ಪಾಲಿಸದಿರುವುದು ಡೆಂಗ್ಯೂ ಹೆಚ್ಚಳಕ್ಕೆ ಕಾರಣವಾಗುತ್ತಿದೆ.
ಕಳೆದ ವರ್ಷ 2023 ಜನವರಿಯಿಂದ ಜೂನ್ ವೇಳೆಗೆ 2003 ಕೇಸ್ ದಾಖಲಾಗಿತ್ತು. ಆದರೆ, 2024 ಜೂನ್ವರೆಗೆ 4886 ಪ್ರಕರಣಗಳು ದಾಖಲಾಗಿವೆ. ಬರೋಬ್ಬರಿ ಶೇ 59ರಷ್ಟು ಡೆಂಗ್ಯೂ ಕೇಸ್ ಏರಿಕೆ ಕಂಡಿದೆ. ಬೆಂಗಳೂರಿನಲ್ಲೇ 2457 ಕೇಸ್ ಪತ್ತೆಯಾಗಿದೆ. ಇನ್ನೂ ಚಿಕ್ಕಮಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು 489ಕ್ಕೆ ಏರಿವೆ.
ರಾಜ್ಯದಲ್ಲಿ ಶೇ. 59 ರಷ್ಟು ಡೆಂಗ್ಯೂ ಪ್ರಕರಣಗಳು ಏರಿಕೆಯಾಗಿದೆ. ಎಲ್ಲೆಲ್ಲಿ ಮಳೆ ಬಿಟ್ಟು ಬಿಟ್ಟು ಬರುತ್ತಿದೆಯೋ, ಅಲ್ಲಿ ಡೆಂಗ್ಯೂ ಪ್ರಕರಣ ಏರಿಕೆ ಕಂಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣ ಏರಿಕೆ ಕಂಡಿದೆ. ಸ್ಲಮ್ಗಳಲ್ಲಿ ಹಾಗೂ ನೀರು ನಿಂತ ಪ್ರದೇಶಗಳಲ್ಲಿ ಡೆಂಗ್ಯೂ ಪ್ರಕರಣಗಳು ಏರಿಕೆಯಾಗಿದೆ. ತೀವ್ರ ಜ್ವರ ಕಂಡು ಬಂದರೆ ನಿರ್ಲಕ್ಷ್ಯ ಬೇಡ. ಹೈ ಫೀವರ್ ಕಂಡು ಬಂದರೆ ಆಸ್ಪತ್ರೆ ದಾಖಲಾಗುವುದು ಉತ್ತಮ ಎಂದು ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏರಿಕೆಯಾಗಿದ್ದು, ಆಸ್ಪತ್ರೆಗಳಲ್ಲಿ ಜ್ವರ, ಮೈ -ಕೈ ನೋವು, ತಲೆನೋವು ಸೇರಿದಂತೆ ಡೆಂಗ್ಯೂ ರೋಗ ಲಕ್ಷಣವುಳ್ಳ ಪ್ರಕರಣಗಳು ಹೆಚ್ಚು ದಾಖಲಾಗುತ್ತಿದೆ. ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ. ಈವರೆಗೆ ಒಟ್ಟು 211 ಪ್ರಕರಣಗಳು ದಾಖಲಾಗಿದೆ.
ಡೆಂಗ್ಯೂ ರೋಗ ಲಕ್ಷಣ:ಡೆಂಗ್ಯೂ ಜ್ವರ ತಲೆನೋವಿನಂತಹ ರೋಗಲಕ್ಷಣಗಳನ್ನು ಉಂಟು ಮಾಡಬಹುದು. ಆದರೆ, ಡೆಂಗ್ಯೂವನ್ನು ಹೆಮರಾಜಿಕ್ ಜ್ವರ ಎಂದೂ ಕರೆಯಲಾಗುತ್ತದೆ. ಡೆಂಗ್ಯೂ ಜ್ವರದ ತೀವ್ರ ಸ್ವರೂಪವು ತೀವ್ರ ರಕ್ತಸ್ರಾವ, ರಕ್ತದೊತ್ತಡ ಹಾಗೂ ರಕ್ತಕಣಗಳ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿ ವ್ಯಕ್ತಿಯ ಸಾವಿಗೂ ಕಾರಣವಾಗಬಹುದು. ಅಧಿಕ ಜ್ವರ, ತೀವ್ರ ತಲೆನೋವು, ವಾಂತಿ, ದೇಹದ ವಿವಿಧ ಭಾಗಗಳಲ್ಲಿ ದದ್ದುಗಳು, ಗ್ರಂಥಿಗಳಲ್ಲಿ ಊತ, ಮೂಳೆ ಮತ್ತು ಕೀಲು ನೋವು, ರಕ್ತಸ್ರಾವವಾಗವುದು ರೋಗ ಲಕ್ಷಣಗಳಾಗಿವೆ.
ಡೆಂಗ್ಯೂ ಹೇಗೆ ಹರಡುವುದೇಗೆ?:ಡೆಂಗ್ಯೂ ಜ್ವರ ಸೊಳ್ಳೆಯಿಂದ ಹರಡುವ ವೈರಲ್ ಸೋಂಕು ಆಗಿದೆ. ಇದು ಈಡಿಪಸ್ ಎಂಬ ಹೆಣ್ಣು ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಸೊಳ್ಳೆ ಕಚ್ಚಿದ 4-7 ದಿನಗಳ ನಂತರ ರೋಗ ಲಕ್ಷಣಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ಇದರ ಪ್ರಭಾವ ಹತ್ತು ದಿನಗಳವರೆಗೆ ಇರುತ್ತದೆ. ಹೀಗಾಗಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು ಉತ್ತಮ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ನಗರದಲ್ಲಿ ನೀರು ನಿಲ್ಲುವ ಹೂವಿನ ಕುಂಡ, ಟೈರ್, ತೆರೆದಿಡುವ ನೀರಿನ ಟ್ಯಾಂಕ್, ಟೆರೇಸ್ ಮೇಲಿರುವ ಒವರ್ ಹೆಡ್ ಟ್ಯಾಂಕ್ ಕಾರಣವಾಗುತ್ತಿದೆ. ಇದರ ಜೊತೆ ಈ ಬಾರಿ ಬಿಟ್ಟು ಬಿಟ್ಟು ಮಳೆಯಾಗುತ್ತಿದ್ದು ಇದು ಸಹ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದೆ. ಹೀಗಾಗಿ ಆರೋಗ್ಯ ಇಲಾಖೆ ತಂಡಗಳನ್ನು ರಚಿಸಿಕೊಂಡು ರೋಗ ಪತ್ತೆಯ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ರೋಗನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳು, ಗರ್ಭಿಣಿಯರು, ವೃದ್ಧರು, ರೋಗಿಗಳು ಎಚ್ಚರಿಕೆ ಇರಬೇಕಾಗುತ್ತದೆ.
ಇದನ್ನೂ ಓದಿ:ರಾಜ್ಯದ ಜನತೆಗೆ ಮತ್ತೊಂದು ಶಾಕ್: ಹಾಲಿನ ದರ ಪ್ರತಿ ಲೀಟರ್ಗೆ 2 ರೂ. ಹೆಚ್ಚಳ! - MILK PRICE HIKE