HMPV Virus in India:ಕೋವಿಡ್-19 ದಾಳಿಯಿಂದ ಚೇತರಿಸಿಕೊಳ್ಳುತ್ತಿರುವಾಗ, ಮತ್ತೊಂದು ಹೊಸ ವೈರಸ್ ಜನರನ್ನು ಚಿಂತೆಗೀಡು ಮಾಡಿದೆ. ಚೀನಾದಲ್ಲಿ ಹರಡುತ್ತಿರುವ ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ (HMPV) ಇದೀಗ ವಿಶ್ವದಾದ್ಯಂತ ಆತಂಕ ಮೂಡಿಸುತ್ತಿದೆ. ಭಾರತದಲ್ಲಿ ಎಚ್ಎಂಪಿ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಯಾರಿಗೆ ಈ ಕಾಯಿಲೆ ಬರುವ ಸಾಧ್ಯತೆ ಹೆಚ್ಚು ಇರುತ್ತದೆ? ಎಚ್ಎಂಪಿ ವೈರಸ್ ತಡೆಗಟ್ಟಲು ಯಾವೆಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ತಿಳಿಯೋಣ.
ಯಾವ ಅಂಗದ ಮೇಲೆ ವೈರಸ್ ಪರಿಣಾಮ ಬೀರುತ್ತೆ?:ಸಾಮಾನ್ಯ ಶೀತದಂತೆ ಕಂಡುಬರುವ ಎಚ್ಎಂಪಿ ವೈರಸ್ ಶ್ವಾಸಕೋಶದ ಸೋಂಕುಗಳಿಗೆ ಕಾರಣವಾಗಬಹುದು. ಇದು ಉಸಿರಾಟದ ಸಿನ್ಸಿಟಿಯಲ್ ವೈರಸ್ (RSV) ಯಂತೆಯೇ ರೋಗ ಲಕ್ಷಣಗಳನ್ನು ಹೊಂದಿದೆ. ಇದೇ ವರ್ಗದ ವೈರಸ್‌ಗಳಿಗೆ ಸೇರಿದೆ. ಇದನ್ನು 24 ವರ್ಷಗಳ ಹಿಂದೆ 2001ರಲ್ಲಿ ನೆದರ್ಲ್ಯಾಂಡ್ಸ್ನಲ್ಲಿ ಗುರುತಿಸಲಾಗಿದೆ ಎಂದು ಜನರಲ್ ವೈದ್ಯ ಡಾ.ಎಂ.ವಿ. ರಾವ್ ತಿಳಿಸಿದರು.
ಎಚ್ಎಂಪಿ ವೈರಸ್ ವರ್ಷದ ಯಾವುದೇ ಸಮಯದಲ್ಲಿ ಜನರಿಗೆ ಸೋಂಕು ತಗುಲಬಹುದು. ಆದರೆ, ಈ ವೈರಸ್ ಚಳಿಗಾಲದಲ್ಲಿ ಮಾತ್ರ ಹೆಚ್ಚು ಹರಡುತ್ತದೆ. ಎಚ್ಎಂಪಿ ವೈರಸ್ ಕೆಲವು ಜನರಲ್ಲಿ ನ್ಯುಮೋನಿಯಾಕ್ಕೆ ಕಾರಣವಾಗಬಹುದು. ಅಸ್ತಮಾ ಮತ್ತು COPD ಯಂತಹ ಕಾಯಿಲೆಗಳಿಗೂ ಕಾರಣವಾಗುತ್ತದೆ. ಹೆಚ್ಚಿನವರು ಐದು ವರ್ಷಗಳೊಳಗೆ ಮೊದಲ ಬಾರಿಗೆ ಸೋಂಕಿಗೆ ಒಳಗಾಗುತ್ತಿದ್ದಾರೆ. ಶೇ.10ರಿಂದ 12 ರಷ್ಟು ಮಕ್ಕಳಲ್ಲಿ ಉಸಿರಾಟದ ಸೋಂಕುಗಳಿಗೆ ಕಾರಣವಾಗಿದೆ ಎಂದು ಸಂಶೋಧನೆ ಬಹಿರಂಗಪಡಿಸುತ್ತದೆ.
ಎಚ್ಎಂಪಿ ವೈರಸ್ನಿಂದ ಹೆಚ್ಚು ತೊಂದರೆಯಿಲ್ಲ ಎಂದು ಅನೇಕ ತಜ್ಞರು ಹೇಳುತ್ತಾರೆ. ಆದರೆ, ಶೇ.5ರಿಂದ 16ರಷ್ಟು ಮಕ್ಕಳು ನ್ಯುಮೋನಿಯಾದಂತಹ ಕಡಿಮೆ ಉಸಿರಾಟದ ಸೋಂಕುಗಳಿಗೆ ಕಾರಣವಾಗಬಹುದು. ಎಚ್ಎಂಪಿ ವೈರಸ್ ವಾಸ್ತವವಾಗಿ ನೆಗಡಿ ಮತ್ತು ಜ್ವರ ವೈರಸ್‌ಗಳಂತಿದೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ವಿಶೇಷವಾಗಿ 6-12 ತಿಂಗಳ ಮಕ್ಕಳು ಹೆಚ್ಚು ಸೋಂಕಿಗೆ ಒಳಗಾಗುತ್ತಾರೆ ಎಂದು ಅನೇಕ ದೇಶಗಳಲ್ಲಿನ ಅಧ್ಯಯನಗಳು ಬಹಿರಂಗಪಡಿಸಿವೆ. ಈ ರೋಗವು ಅಷ್ಟು ಗಂಭೀರವಾಗಿಲ್ಲ. ವಿವಿಧ ಆರೋಗ್ಯದ ಸಮಸ್ಯೆಯಿರುವಂತಹ ಶಿಶುಗಳು ಮತ್ತು ಕಡಿಮೆ ತೂಕದ ಶಿಶುಗಳಲ್ಲಿ ಆರೋಗ್ಯ ಮತ್ತಷ್ಟು ಹದಗೆಡುವ ಅಪಾಯವಿದೆ. ಅಲ್ಲದೆ, 65 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ, ಇದು ಸಾಮಾನ್ಯ ಶೀತವಾಗಿ ಪ್ರಾರಂಭವಾಗಬಹುದು ಹಾಗೂ ಅಪರೂಪದ ಪ್ರಕರಣಗಳಲ್ಲಿ ನ್ಯುಮೋನಿಯಾ ಆಗಿ ಬದಲಾಗಬಹುದು. ಹೃದ್ರೋಗ, ಮೂತ್ರಪಿಂಡ ಕಾಯಿಲೆ, ಮಧುಮೇಹ, ಅಸ್ತಮಾ, ನರಗಳ ದೌರ್ಬಲ್ಯ, COPD, ಕಡಿಮೆ ರೋಗನಿರೋಧಕ ಶಕ್ತಿ, ಕ್ಯಾನ್ಸರ್ ಚಿಕಿತ್ಸೆ ಮತ್ತು ಅಂಗಾಂಗ ಕಸಿ ಮಾಡಿಸಿಕೊಂಡವರಿಗೆ ಈ ವೈರಸ್ ಅಪಾಯಕಾರಿಯಾಗಿದೆ.
-ಡಾ.ಎಂ.ವಿ.ರಾವ್, ಜನರಲ್ ವೈದ್ಯ
ಕೋವಿಡ್‌ನಂತೆ ಅಪಾಯಕಾರಿ ಅಲ್ಲ: ಇದು ಕೋವಿಡ್‌ನಷ್ಟು ಗಂಭೀರ ವೈರಸ್ ಅಲ್ಲ. ಇದು ರಕ್ತನಾಳಗಳನ್ನು ಹಾನಿಗೊಳಿಸುವುದು. ರಕ್ತ ಹೆಪ್ಪುಗಟ್ಟುವಿಕೆಯನ್ನು ಉಂಟುಮಾಡುವಂತಹ ಅಪಾಯಕಾರಿ ಸಂದರ್ಭಗಳಿಗೆ ಕಾರಣವಾಗುವುದಿಲ್ಲ. Covid-19 ಮತ್ತು HMPV ನಡುವಿನ ವ್ಯತ್ಯಾಸವೆಂದರೆ, ಇದು ಹೊಸದಲ್ಲ. ಕೋವಿಡ್- 19 ಹೊಸ ವೈರಸ್ ಆಗಿದ್ದರಿಂದ, ಅದನ್ನು ಎದುರಿಸಲು ನಮ್ಮ ದೇಹದಲ್ಲಿ ಪ್ರತಿಕಾಯಗಳ ಕೊರತೆಯಿಂದಾಗಿ ಇದು ತೀವ್ರ ಪರಿಣಾಮ ಬೀರಿತು. ನಾವು ಅದಕ್ಕೆ ಪ್ರತಿರೋಧವನ್ನು ಬೆಳೆಸಿಕೊಂಡಿದ್ದರಿಂದ ಅದೇ ಕೋವಿಡ್ ಈಗ ಸಾಮಾನ್ಯ ಶೀತವಾಗಿದೆ. HMPV ಯಾವಾಗಲೂ ಇರುವುದರಿಂದ, ಹೆಚ್ಚಿನ ಜನರು ಅದರ ವಿರುದ್ಧ ಪ್ರತಿಕಾಯಗಳನ್ನು ಹೊಂದಿದ್ದಾರೆ. ಹಾಗಾಗಿ ಭಯಪಡುವ ಅಗತ್ಯವಿಲ್ಲ ಎಂದು ವೈದ್ಯ ಡಾ.ಎಂ.ವಿ.ರಾವ್ ಭರವಸೆ ನೀಡಿದ್ದಾರೆ.