ಹೈದರಾಬಾದ್:ಸಾಮಾನ್ಯವಾಗಿ ಕೊಬ್ಬು ಎಂದಾಕ್ಷಣ ಜನರು ಆತಂಕ ಪಡುತ್ತಾರೆ. ಆದರೆ ಉತ್ತಮ ಕೊಬ್ಬು (ಹೆಚ್ಡಿಎಲ್) ದೇಹಕ್ಕೆ ಅಗತ್ಯವಾಗಿದೆ. ಈ ಕೊಬ್ಬು ಹೃದಯದ ಆರೋಗ್ಯಕ್ಕೆ ಉತ್ತಮವಾಗಿದ್ದು, ರೋಗ ತಡೆಗಟ್ಟಲು ಸಹಾಯ ಮಾಡುತ್ತದೆ. ಉತ್ತಮ ಕೊಲೆಸ್ಟ್ರಾಲ್ ದೇಹದೊಳಗಿನ ಕಲ್ಮಶವನ್ನು ತೆಗೆದುಹಾಕಲು, ದೇಹಕ್ಕೆ ಶಕ್ತಿಯನ್ನು ಒದಗಿಸಲು ಸಹಾಯ ಮಾಡುತ್ತದೆ. ಈ ಹಿನ್ನೆಲೆ ದೇಹಕ್ಕೆ ಹೆಚ್ಡಿಎಲ್ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುವುದು ಅಗತ್ಯವಾಗಿದೆ. ಆದಾಗ್ಯೂ ಇಂತಹ ಕೊಬ್ಬು ಹೆಚ್ಚಳಕ್ಕೆ ಮಾತ್ರೆಗಳಿದ್ದರೂ, ಅವು ಹೃದಯದ ಅಪಾಯವನ್ನು ಕಡಿಮೆ ಮಾಡುವುದಿಲ್ಲ ಎಂದು ಅಧ್ಯಯನಗಳು ಹೇಳುತ್ತವೆ. ಆದರೆ, ಉತ್ತಮ ಜೀವನಶೈಲಿಯ ಅಭ್ಯಾಸ ನಡೆಸುವ ಜೊತೆಗೆ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ ಉತ್ತಮ ಕೊಬ್ಬನ್ನು ಹೆಚ್ಚಿಸಬಹುದು. ಇದರಿಂದ ಹೃದಯದ ಅಪಾಯವನ್ನು ಕಡಿಮೆ ಮಾಡಬಹುದು.
ಉತ್ತಮ ಕೊಬ್ಬಿಗೆ ಈ ಕ್ರಮ ಅನುಸರಿಸಿ:
- ತಾಜಾ ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚೆಚ್ಚು ಸೇವಿಸಿ. ನೀರಿನಾಂಶದ ಫೈಬರ್ ಹೊಂದಿರುವ ಸೇಬು, ಕಿತ್ತಳೆ, ಬಟಾಣಿ, ಕ್ಯಾರೆಟ್ ಮತ್ತು ಓಟ್ಸ್ ಸೇವಿಸಬಹುದು. ಜೊತೆಗೆ ಧಾನ್ಯಗಳು, ಅಕ್ಕಿ ಮತ್ತು ಮೀನು ಸೇವಿಸಿ. ಹಾಗೇ ಮಾಂಸ, ಉಪ್ಪು ಮತ್ತು ಕರಿದ ಅಂಶವನ್ನು ಕಡಿಮೆ ಮಾಡಿ.
- ಉತ್ತಮ ಕೊಲೆಸ್ಟ್ರಾಲ್ ಹೆಚ್ಚಳಕ್ಕೆ ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಗೆ ಸಹಾಯವಾಗಲಿದೆ. ನಡಿಗೆ, ರನ್ನಿಂಗ್, ಸೈಕಲಿಂಗ್, ಈಜು, ತೂಕ ಎತ್ತುವುದು, ಗಾರ್ಡನಿಂಗ್ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಹುದು.
- ಭಾರೀ ತೂಕ ಹೊಂದಿದ್ದರೆ, ಇದನ್ನು ತಗ್ಗಿಸುವುದು ಅವಶ್ಯ. ದೇಹದ ತೂಕದಲ್ಲಿ ಕೇವಲ ಶೇ.5ರಿಂದ 10ರಷ್ಟು ನಷ್ಟವು ಹೆಚ್ಡಿಎಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದೇ ವೇಳೆ ಇದರಿಂದ ಕೆಟ್ಟ ಕೊಬ್ಬು ಸಹ ಕಡಿಮೆಯಾಗುತ್ತದೆ.
- ಧೂಮಪಾನ ತ್ಯಜಿಸುವ ಮೂಲಕವೂ ಮೂರು ವಾರಗಳಲ್ಲಿ ಉತ್ತಮ ಕೊಬ್ಬು ಹೆಚ್ಚಿಸಿಕೊಳ್ಳಬಹುದು ಎಂದು ಅಧ್ಯಯನಗಳು ತೋರಿಸಿವೆ.