Health Benefits Of Cinnamon:ಇತ್ತೀಚಿನ ದಿನಗಳಲ್ಲಿ ಮಧುಮೇಹಿಗಳ (ಸಕ್ಕರೆ ಕಾಯಿಲೆ) ಸಂಖ್ಯೆ ಹೆಚ್ಚುತ್ತಿದೆ. ಒಮ್ಮೆ ಈ ಕಾಯಿಲೆ ಬಂದರೆ, ಜೀವನ ಪರ್ಯಂತ ಔಷಧಿ ಸೇವಿಸಬೇಕು. ಇಲ್ಲವೇ ತಿನ್ನುವ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ದೀರ್ಘಾವಧಿಯಲ್ಲಿ ಇತರೆ ಹಲವು ರೀತಿಯ ರೋಗಗಳು ಬಾಧಿಸಲು ಕೂಡಾ ಕಾರಣವಾಗುತ್ತದೆ. ಮಧುಮೇಹಿಗಳು ದಾಲ್ಚಿನ್ನಿ ಬಳಸುವುದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು ಎಂದು ವೈದ್ಯಕೀಯ ತಜ್ಞರು ತಿಳಿಸಿದ್ದಾರೆ. ದಾಲ್ಚಿನ್ನಿ ಮತ್ತು ಸಕ್ಕರೆಯ ನಡುವಿನ ಸಂಬಂಧವೇನು? ದಾಲ್ಚಿನ್ನಿ ನಿಜವಾಗಿಯೂ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುವುದೇ? ಎಂಬುದನ್ನು ತಿಳಿಯೋಣ.
ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ದಾಲ್ಚಿನ್ನಿ ಬಳಸುವುದರಿಂದ ದೇಹದ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ. ಏಕೆಂದರೆ, ಮಧುಮೇಹ ಇರುವವರಲ್ಲಿ ಅವರ ಮೆದೋಜೀರಕ ಗ್ರಂಥಿಯು ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಉತ್ಪಾದಿಸುವುದಿಲ್ಲ. ಇದು ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗಲು ಕಾರಣವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ವಾಲ್ಡೆನ್ ಯೂನಿವರ್ಸಿಟಿ ಮತ್ತು ಲೂಯಿಸಿಯಾನ ಸ್ಟೇಟ್ ಯೂನಿವರ್ಸಿಟಿಯ ಅಧ್ಯಾಪಕರಾದ ಡಾ.ಸಿಂಥಿಯಾ ಕಾಬ್ ಅವರ ಪ್ರಕಾರ, ದಾಲ್ಚಿನ್ನಿಯಲ್ಲಿರುವ ನೈಸರ್ಗಿಕ ಇನ್ಸುಲಿನ್ ರಕ್ತದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯಕ. ಈ ವಿಷಯವನ್ನು ಹೆಲ್ತ್‌ಲೈನ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.(ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ).
ಮತ್ತೊಂದು ಅಧ್ಯಯನ ಏನು ಹೇಳುತ್ತೆ?: ಕ್ಯಾಲಿಫೋರ್ನಿಯಾದ ವಿಜ್ಞಾನಿಗಳ ಸಂಶೋಧನೆಯು ಟೈಪ್ 2 ಮಧುಮೇಹ ಹೊಂದಿರುವ ರೋಗಿಗಳಲ್ಲಿ ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಿಸಲು ದಾಲ್ಚಿನ್ನಿ ಉಪಯುಕ್ತ ಎಂದು ಬಹಿರಂಗಪಡಿಸಿದೆ. ಇದರ ಭಾಗವಾಗಿ, 543 ಟೈಪ್ 2 ಮಧುಮೇಹ ರೋಗಿಗಳಲ್ಲಿ ಕೆಲವರಿಗೆ ದಿನಕ್ಕೆ 120 ಮಿಲಿ ಗ್ರಾಂನಿಂದ 6 ಗ್ರಾಂ ದಾಲ್ಚಿನ್ನಿ ಮಾತ್ರೆಗಳನ್ನೂ ಇತರರಿಗೆ ಸಾಮಾನ್ಯ ಮಾತ್ರೆಗಳನ್ನು ನೀಡಲಾಗಿತ್ತು. ಇವುಗಳನ್ನು ಪರೀಕ್ಷಿಸಿದ ನಂತರ, ದಾಲ್ಚಿನ್ನಿ ಮಾತ್ರೆ ಸೇವಿಸಿದವರ ರಕ್ತದಲ್ಲಿನ ಸಕ್ಕರೆ ಮಟ್ಟ ಇತರರಿಗಿಂತ ಉತ್ತಮವಾಗಿ ನಿಯಂತ್ರಿಸಲ್ಪಟ್ಟಿದೆ. ದಾಲ್ಚಿನ್ನಿ ಇನ್ಸುಲಿನ್ ಹಾರ್ಮೋನ್ ಬಿಡುಗಡೆ ಮತ್ತು ಕ್ರಿಯೆಯ ಮೇಲೆ ಪ್ರಭಾವ ಬೀರುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟ ಸುಧಾರಿಸುತ್ತಿರುವುದು ಕಂಡುಬಂದಿದೆ. ಪ್ರತಿದಿನ 1/4 ಟೀಸ್ಪೂನ್ ದಾಲ್ಚಿನ್ನಿ ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು ಎಂದು ಹಲವು ಸಂಶೋಧನೆಗಳು ಹೇಳಿವೆ.