ನವದೆಹಲಿ:ಕಾಂಗೋ, ಆಫ್ರಿಕಾದ ಬಳಿಕ ಇದೀಗ ಸ್ವೀಡನ್ ಮತ್ತು ಪಾಕಿಸ್ತಾನದಲ್ಲಿ ಎಂಪಾಕ್ಸ್ ಪ್ರಕರಣಗಳು ವರದಿಯಾಗಿವೆ. ಎಂಪಾಕ್ಸ್ ಸೋಂಕು ಹಲವು ದೇಶಗಳಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಾರಣಾಂತಿಕ ಸೋಂಕಿನ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಆಫ್ರಿಕಾದಲ್ಲಿ 13 ದೇಶಗಳಲ್ಲಿ ಸೋಂಕು ಹರಡಿದ್ದು, ಎಂಪಾಕ್ಸ್ ಸೋಂಕನ್ನು ಜಾಗತಿಕ ಆರೋಗ್ಯ ತುರ್ತು ಸ್ಥಿತಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಇತ್ತೀಚೆಗೆ ಈ ಮಾರಾಣಾಂತಿಕ ಸೋಂಕಿನ ತಳಿ ಕ್ಲೇಡ್ 1ಬಿ ಸ್ವೀಡನ್ನಲ್ಲಿ ವರದಿಯಾಗಿದ್ದು, ಯುರೋಪ್ನಲ್ಲಿ ಸೋಂಕಿನ ಹರಡುವಿಕೆ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ಈ ನಡುವೆ ಪಾಕಿಸ್ತಾನದಲ್ಲೂ ಕೂಡ ಮೂರು ಪ್ರಕರಣಗಳು ಪತ್ತೆಯಾಗಿವೆ. ಅದರ ತಳಿ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಹೆಚ್ಚಿನ ಗಮನ ಅಗತ್ಯ: ಎಂಪಾಕ್ಸ್ ಸೋಂಕಿನ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಂಭೀರವಾಗಿ ಪರಿಗಣಿಸಲಾಗಿದೆ. ಭಾರತದಲ್ಲಿ ಈ ಸೋಂಕಿನ ತಡೆಯಲು ವಿಮಾನ ನಿಲ್ದಾಣದಲ್ಲಿ ರೋಗ ಲಕ್ಷಣ ಪರೀಕ್ಷಿಸಿ, ಸೋಂಕಿತರನ್ನು ಪ್ರತ್ಯೇಕಿಸುವುದೊಂದೇ ಪ್ರಮುಖ ಮಾರ್ಗವಾಗಿದೆ. ಎಂಪಾಕ್ಸ್ ಪ್ರಕರಣಗಳು ವರದಿಯಾಗಿರುವ ಪ್ರದೇಶದಲ್ಲಿ ಪ್ರಯಾಣ ನಡೆಸಿದವರ ಕುರಿತು ಹೆಚ್ಚಿನ ಗಮನಹರಿಸಬೇಕಿದೆ ಎಂದು ಅಶೋಕ ಯುನಿವರ್ಸಿಟಿ ಸಂಶೋಧಕ ಡೀನ್ ಆಗಿರುವ ಡಾ. ಗೌತಮ್ ಮೆನನ್ ತಿಳಿಸಿದ್ದಾರೆ.
ಸೋಂಕಿತ ಪ್ರಯಾಣಿಕರನ್ನು ವರದಿ ಮಾಡಿ ನಿಗಾ ವಹಿಸುವುದು ಅಗತ್ಯವಾಗಿದೆ. ಇದರಿಂದ ಸೋಂಕು ಹರಡುವಿಕೆಗೆ ತಪ್ಪಿಸಬಹುದು. ಜೊತೆಗೆ ಅವರ ಸಂಪರ್ಕಿತರನ್ನು ಪರೀಕ್ಷಿಸಬಹುದಾಗಿದೆ ಎಂದಿದ್ದಾರೆ. ಭಾರತೀಯ ವೈದ್ಯಕೀಯ ಸಂಸ್ಥೆಗಳು ಕೂಡ ಎಂಪಾಕ್ಸ್ ಲಕ್ಷಣ ಅರಿತು ಈ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಲಕ್ಷಣ ತೋರದೇ ಈ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.