ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಭಾರತೀಯರಲ್ಲಿ ಆರೋಗ್ಯಕರ ತಿನಿಸಿನತ್ತ ಒಲವು ಹೆಚ್ಚುತ್ತಿದೆ ಎಂಬ ವಿಚಾರವನ್ನು ಹೊಸ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. 'ದಿ ಹೆಲ್ತಿ ಸ್ನಾಕಿಂಗ್ ರಿಪೋರ್ಟ್ 2024' ವರದಿ ಪ್ರಕಾರ, ಜನರು ಸ್ನಾಕ್ಸ್ ಪ್ಯಾಕೆಟ್ ಮೇಲೆ ಮುದ್ರಿತವಾಗುವ ಪದಾರ್ಥಗಳು ಮತ್ತು ಪೌಷ್ಟಿಕಾಂಶದ ಮೌಲ್ಯಗಳ ವಿವರಗಳನ್ನು ಓದಿಯೇ ಖರೀದಿಗೆ ಮುಂದಾಗುತ್ತಿದ್ದಾರೆ.
ಆಹಾರದ ಕಲಬೆರಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರ ಆಹಾರದ ಆಯ್ಕೆ ಕುರಿತು ಪ್ರಸಿದ್ಧ ಸ್ನಾಕ್ಸ್ ಉತ್ಪಾದಕ ಸಂಸ್ಥೆ ಫಾರ್ಮ್ಲೆ ಅಧ್ಯಯನ ನಡೆಸಿ ಈ ವರದಿ ತಯಾರಿಸಿದೆ.
ದೇಶದೆಲ್ಲೆಡೆ 6 ಸಾವಿರ ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ ಶೇ 73ರಷ್ಟು ಮಂದಿ ಪ್ಯಾಕೆಟ್ನ ಲೇಬಲ್ ಓದುವುದಾಗಿ ತಿಳಿಸಿದ್ದಾರೆ. ಶೇ 93ರಷ್ಟು ಮಂದಿ ಆರೋಗ್ಯಕರ ಆಹಾರಕ್ಕೆ ಒಲವು ತೋರಿಸಿದ್ದಾರೆ. ಲೇಬಲ್ ಓದಿದ ಬಳಿಕ ಆರೋಗ್ಯಕರ ಆಯ್ಕೆಗೆ ತಾವು ಬದಲಾಗುತ್ತಿರುವುದಾಗಿ ಹೇಳಿದ್ದಾರೆ.
ಈ ಸಮೀಕ್ಷೆಯಲ್ಲಿ 10ರ ಪೈಕಿ 9 ಮಂದಿ ಆರೋಗ್ಯಯುತ ಆಹಾರಕ್ಕೆ ಪರ್ಯಾಯವಾಗಿ ಸಾಂಪ್ರದಾಯಿಕ ಸ್ನಾಕ್ಸ್ನತ್ತ ತಮ್ಮ ಚಿತ್ತ ಹೊರಳಿಸಿದ್ದಾರೆ. ವರದಿಯಂತೆ, ಶೇ 60ರಷ್ಟು ಭಾರತೀಯರು ನೈಸರ್ಗಿಕ ಸ್ನಾಕ್ಸ್ ಅಂದರೆ ಕಾಳು, ಧಾನ್ಯಗಳಿಂದ ಕೂಡಿದ ತಿನಿಸು ಇಷ್ಟಪಡುತ್ತಾರೆ. ಇವುಗಳಲ್ಲಿ ಮಖಾನಾ ಮತ್ತು ಡ್ರೈ ಫ್ರೂಟ್ಸ್ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಇವು ಅತಿ ಹೆಚ್ಚು ಪೋಷಕಾಂಶ ಮೌಲ್ಯ ಹೊಂದಿದೆ. ಬಹುತೇಕ ಯುವಜನತೆಯ ಮನಸ್ಸನ್ನು ಈ ತಿನಿಸು ಗೆದ್ದಿದೆ.