ಬೆಂಗಳೂರು: ನಮ್ಮ ರಾಜ್ಯದ ಹೆಮ್ಮೆಯ ಸರ್ಕಾರಿ ಆಸ್ಪತ್ರೆಯಾದ ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಆಂಕೊಲಾಜಿ ಸಂಸ್ಥೆ ಈಗ ಮಹತ್ವದ ಸಾಧನೆ ಮಾಡಿದೆ. ಅನುವಂಶಿಕ ರಕ್ತ ಕಾಯಿಲೆಗಳಲ್ಲಿ ಒಂದಾಗಿರುವ ಥಲಸ್ಸೆಮಿಯಾದಿಂದ ಬಳಲುತ್ತಿದ್ದ ಬಾಲಕನಿಗೆ ಮೊದಲ ಬಾರಿಗೆ ಅಸ್ಥಿಮಜ್ಜೆಯ ಕಸಿಯನ್ನು (ಬೋನ್ ಮ್ಯಾರೋ ಟ್ರಾನ್ಸಪ್ಲಾಂಟ್– BMT) ಅನ್ನು ವೈದ್ಯರು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ವೈದ್ಯರ ಕಾರ್ಯ ಶ್ಲಾಘನೀಯವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ವೈದ್ಯರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು:ಬೆಂಗಳೂರಿನ ಕಿದ್ವಾಯಿ ಸಂಸ್ಥೆಯಲ್ಲಿ ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ ವೈದ್ಯರಿಗೆ ಸಚಿವರು ಸಂಸ್ಥೆಗೆ ಇಂದು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯದ ದುರ್ಬಲ ವರ್ಗದ ಜನರಿಗೆ ಅಸ್ಥಿಮಜ್ಜೆ ಕಸಿ ಸೇವೆಗಳು ಸುಲಭವಾಗಿ ಲಭ್ಯವಾಗುವಂತೆ ಮತ್ತು ಕೈಗೆಟುಕುವಂತೆ ಮಾಡುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಬದ್ಧತೆ ತೋರಿದೆ. ಮುಂದಿನ ದಿನಗಳಲ್ಲಿಯೂ ಈ ರೀತಿಯ ವಿಶೇಷ ಯೋಜನೆಗಳನ್ನು ಜಾರಿಗೆ ತರಲು ನಮ್ಮ ಸರ್ಕಾರ ಚಿಂತನೆ ನಡೆಸಿದೆ ಎಂದು ಸಚಿವರು ತಿಳಿಸಿದರು.
ಸಾಮಾನ್ಯವಾಗಿ, ಖಾಸಗಿ ಆಸ್ಪತ್ರೆಗಳಲ್ಲಿ ಅಸ್ಥಿಮಜ್ಜೆ ಚಿಕಿತ್ಸಾ ವೆಚ್ಚವು 7 ರಿಂದ 15 ಲಕ್ಷ ರೂಪಾಯಿ ಆಗುತ್ತದೆ ಎಂದು ಅಂದಾಜಿಸಲಾಗಿದೆ. ಮತ್ತು ಅಲೋಜೆನಿಕ್ ಬಿಎಂಟಿಗಳು ಲಕ್ಷಾಂತರ ರೂಪಾಯಿ ಆಗುತ್ತದೆ. ಆದರೆ, ಕಿದ್ವಾಯಿ ಸಂಸ್ಥೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ ಎಂದು ಅವರು ಹೇಳಿದರು.
ಹುಟ್ಟತ್ತಲೇ 10,000 ರಿಂದ 15,000 ಮಕ್ಕಳಲ್ಲಿ ಥಲಸ್ಸೆಮಿಯಾ:ಕಿದ್ವಾಯಿ ಸಂಸ್ಥೆಯ ಆಡಳಿತಾಧಿಕಾರಿ ಡಾ.ನವೀನ್ ಭಟ್ ಮಾತನಾಡಿ, ಥಲಸ್ಸೆಮಿಯಾ ಸಾಮಾನ್ಯ ಅನುವಂಶಿಕ ರಕ್ತ ಕಾಯಿಲೆಗಳಲ್ಲಿ ಒಂದಾಗಿದೆ. ಈ ಸ್ಥಿತಿಯಲ್ಲಿ, ಸಣ್ಣ ಗಾತ್ರದ ಕೆಂಪು ರಕ್ತ ಕಣಗಳ ಉತ್ಪಾದನೆ ಹೆಚ್ಚಾಗುತ್ತದೆ. ಇದರಿಂದ ರಕ್ತಹೀನತೆಗೆ ಮಾಸಿಕ ರಕ್ತ ವರ್ಗಾವಣೆ ಮತ್ತು ಕಬ್ಬಿಣಾಂಶದ ಅಗತ್ಯವಿರುತ್ತದೆ. ರಾಷ್ಟ್ರೀಯ ಆರೋಗ್ಯ ಮಿಷನ್ ಅಂಕಿ - ಅಂಶಗಳ ಪ್ರಕಾರ, ಥಲಸ್ಸೆಮಿಯಾ ಮೇಜರ್ಗೆ ಪ್ರಮುಖ ಚಿಕಿತ್ಸೆ ಎಂದರೆ ಬೋನ್ ಮ್ಯಾರೋ ಟ್ರಾನ್ಸಪ್ಲಾಂಟೇಷನ್ (ಬಿಎಂಟಿ). ಭಾರತದಲ್ಲಿ ಪ್ರತಿ ವರ್ಷ ಸರಿಸುಮಾರು 10,000 ರಿಂದ 15,000 ಮಕ್ಕಳು ಥಲಸ್ಸೆಮಿಯಾ ಮೇಜರ್ನೊಂದಿಗೆ ಜನಿಸುತ್ತಾರೆ. ಜಾಗತಿಕ ಥಲಸ್ಸೇಮಿಯಾ ಪ್ರಮಾಣದಲ್ಲಿ ದೇಶದ ಕೊಡುಗೆ ಸುಮಾರು ಶೇ 25ರಷ್ಟು ಇದೆ ಎಂದರು.