Milk Reduces The Risk Of Colon Cancer: ಪ್ರತಿದಿನ ಒಂದು ಗ್ಲಾಸ್ ಹಾಲು ಕುಡಿಯುವುದರಿಂದ ಕೊಲೊನ್ (ಕರುಳಿನ) ಕ್ಯಾನ್ಸರ್ ಅಪಾಯ ಕಡಿಮೆ ಮಾಡಬಹುದು ಎಂದು ಸಂಶೋಧನೆಯೊಂದು ಬಹಿರಂಗಪಡಿಸಿದೆ. ವಿಶ್ವದಾದ್ಯಂತ ಕಂಡುಬರುವಂತಹ ಮೂರನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಇದಾಗಿದೆ. ಕ್ಯಾನ್ಸರ್ ರಿಸರ್ಚ್ ಯುಕೆ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಸಂಶೋಧನೆಯ ಪ್ರಕಾರ, ದಿನಕ್ಕೆ ಒಂದು ಲೋಟ ಹಾಲು ಕುಡಿಯುವುದರಿಂದ ಕರುಳಿನ ಕ್ಯಾನ್ಸರ್ ಅಪಾಯವು ಶೇಕಡಾ 17 ರಷ್ಟು ಕಡಿಮೆ ಮಾಡಬಹುದು ಎಂದು ತೋರಿಸಿದೆ.
16 ವರ್ಷಗಳಲ್ಲಿ 500,000ಕ್ಕೂ ಹೆಚ್ಚು ಮಹಿಳೆಯರ ಆಹಾರಕ್ರಮವನ್ನು ವಿಶ್ಲೇಷಿಸಿದ ಬಳಿಕ ಸಂಶೋಧಕರು, ಈ ಆವಿಷ್ಕಾರವನ್ನು ಮಾಡಿದ್ದಾರೆ. ಹಾಲಿನ ಜೊತೆಗೆ, ಹಸಿರು ಸೊಪ್ಪಿನ ತರಕಾರಿಗಳು, ಬ್ರೆಡ್ ಮತ್ತು ಇತರ ಕ್ಯಾಲ್ಸಿಯಂ ಭರಿತ ಆಹಾರಗಳು ಸಹ ಕೊಲೊನ್ ಕ್ಯಾನ್ಸರ್‌ನಿಂದ ರಕ್ಷಿಸುತ್ತವೆ ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ.
ನೇಚರ್ ಕಮ್ಯುನಿಕೇಷನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಪ್ರತಿದಿನ ಒಂದು ದೊಡ್ಡ ಗ್ಲಾಸ್ ವೈನ್ ಅಥವಾ ಮದ್ಯ ಸೇವಿಸುವುದರಿಂದ ಕ್ಯಾನ್ಸರ್ ಅಪಾಯವು ಶೇಕಡಾ 15 ರಷ್ಟು ಹೆಚ್ಚಾಗುತ್ತದೆ. ಹೆಚ್ಚುವರಿಯಾಗಿ, ನಿಯಮಿತವಾಗಿ ಹೆಚ್ಚಿನ ಪ್ರಮಾಣದಲ್ಲಿ ಸಂಸ್ಕರಿಸಿದ ಅಥವಾ ಕೆಂಪು ಮಾಂಸವನ್ನು ಸೇವಿಸುವುದರಿಂದ ಅಪಾಯವನ್ನು ಶೇಕಡಾ 8 ರಷ್ಟು ಹೆಚ್ಚಿರುತ್ತದೆ.
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನದ ನೇತೃತ್ವ ವಹಿಸಿದ್ದ ಡಾ. ಕರೆನ್ ಪೇಪಿಯರ್ ಅವರು, ಕ್ಯಾಲ್ಸಿಯಂ ಭರಿತ ಡೈರಿ ಉತ್ಪನ್ನಗಳು ಕೊಲೊನ್ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯಲು ಇದು ಸಹಾಯ ಮಾಡುತ್ತದೆ ಎಂದು ತಿಳಿಸುತ್ತಾರೆ. ಹಣ್ಣುಗಳು, ಧಾನ್ಯಗಳು, ಕಾರ್ಬೋಹೈಡ್ರೇಟ್‌ಗಳು, ಫೈಬರ್ ಮತ್ತು ವಿಟಮಿನ್ ಸಿ ಕ್ಯಾನ್ಸರ್ ಅಪಾಯವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನ ಹೇಳುತ್ತದೆ. ಆದರೆ, ಚೀಸ್ ಮತ್ತು ಐಸ್ ಕ್ರೀಂನಲ್ಲಿ ಇದೇ ರೀತಿಯ ಪ್ರಯೋಜನಗಳು ಕಂಡುಬಂದಿಲ್ಲ.
ಕ್ಯಾಲ್ಸಿಯಂನ ಲಾಭಗಳು : ಕ್ಯಾಲ್ಸಿಯಂ ಮೂಳೆಗಳು ಮತ್ತು ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖವಾದ ಪಾತ್ರ ವಹಿಸುವ ಖನಿಜವಾಗಿದೆ. ಹೊಸ ಅಧ್ಯಯನಗಳು ಕ್ಯಾಲ್ಸಿಯಂ ಕೊಲೊನ್ ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂದು ಹೇಳುತ್ತದೆ. ಇದು ಕೊಲೊನ್‌ನಲ್ಲಿ ಪಿತ್ತರಸ ಆಮ್ಲಗಳು ಮತ್ತು ಮುಕ್ತ ಕೊಬ್ಬಿನಾಮ್ಲಗಳನ್ನು ಬಂಧಿಸುವ ಸಾಮರ್ಥ್ಯ ಹೊಂದಿದೆ. ಇದು ಕರುಳಿನ ಒಳಪದರಕ್ಕೆ ಹಾನಿಯಾಗದಂತೆ ತಡೆಯಲು ಸಹಾಯ ಮಾಡುತ್ತದೆ ಎಂದು ಸಂಶೋಧಕ ಡಾ. ಕರೆನ್ ಪೇಪಿಯರ್ ವಿವರಿಸುತ್ತಾರೆ.