ನಮ್ಮ ಆಹಾರದಲ್ಲಿ ಪ್ರೋಟೀನ್ ಸಮೃದ್ಧವಾಗಿರುವ ಅನೇಕ ಆಹಾರ ಪದಾರ್ಥಗಳಿವೆ. ಈ ಆಹಾರ ಪದಾರ್ಥಗಳನ್ನು ನಾವು ನಿತ್ಯವೂ ಸೇವಿಸುತ್ತೇವೆ. ಆದರೆ, ಹೆಚ್ಚಿನ ಪ್ರೋಟೀನ್ ಸೇವನೆಯು ನಮ್ಮ ಕಿಡ್ನಿಯನ್ನು ಹಾನಿಗೊಳಿಸುತ್ತದೆ ಎಂಬ ಕಲ್ಪನೆಯನ್ನು ಅನೇಕ ಜನರು ಹೊಂದಿದ್ದಾರೆ. ಆದರೆ ಇದರಲ್ಲಿ ಎಷ್ಟರಮಟ್ಟಿಗೆ ಸತ್ಯವಿದೆ ಎಂಬುದನ್ನು ಇಲ್ಲಿ ನಾವು ನಿಮಗೆ ತಿಳಿಸಲಿದ್ದೇವೆ.
ಪ್ರೋಟೀನ್ ದೇಹಕ್ಕೆ ಅಗತ್ಯವಿರುವ ಪ್ರಮುಖ ಪೋಷಕಾಂಶ. ಪ್ರೋಟೀನ್ ನಮ್ಮ ದೇಹದ ಸ್ನಾಯುಗಳನ್ನು ಬಲಪಡಿಸುತ್ತದೆ. ಇದರಿಂದ ಭಾರವಾದ ಕೆಲಸವನ್ನು ಮಾಡಲು ಸಾಧ್ಯ. ಸಾಮಾನ್ಯರಿಗಿಂತ ವ್ಯಾಯಾಮ, ದೇಹದಾರ್ಢ್ಯ ಮತ್ತು ಕ್ರೀಡಾಪಟುಗಳಿಗೆ ಪ್ರೋಟೀನ್ ಸೇವನೆ ಬಹಳ ಮುಖ್ಯ. ಆದರೆ ಕೆಲವರಿಗೆ ಪ್ರೊಟೀನ್ಯುಕ್ತ ಆಹಾರ ಸೇವನೆ ಕಿಡ್ನಿಗಳಿಗೆ ಅಪಾಯವನ್ನುಂಟು ಮಾಡುತ್ತದೆ ಎಂಬ ನಂಬಿಕೆ ಹಲವರ ಮನಸ್ಸಿನಲ್ಲಿದೆ. ಹಾಗಾದರೆ ಎಷ್ಟು ಪ್ರಮಾಣದಲ್ಲಿ ಪ್ರೋಟೀನ್ ಸೇವನೆ ಮಾಡಬೇಕು? ನಿಮ್ಮ ಈ ಗೊಂದಲಕ್ಕೆ ಸಂಪೂರ್ಣ ಮಾಹಿತಿ ಇಲ್ಲಿದೆ.
ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನ ವರದಿಯ ಪ್ರಕಾರ, ದಿನಕ್ಕೆ 60 ಗ್ರಾಂ ಪ್ರೋಟೀನ್ ಸೇವನೆಯಾಗಬೇಕು. ಇದು ನಕಾರಾತ್ಮಕ ಸಾರಜನಕ ಸಮತೋಲನವನ್ನು ತಪ್ಪಿಸಲು ಅಗತ್ಯವಿರುವ ಪ್ರೋಟೀನ್‌ನ ಪ್ರಮಾಣಕ್ಕೆ ಅನುಗುಣವಾಗಿರುತ್ತದೆ.
ವೈದ್ಯರು ಹೇಳುವುದೇನು?: ಹೈದರಾಬಾದ್ ಅಪೋಲೋ ಆಸ್ಪತ್ರೆಯ ನರರೋಗ ತಜ್ಞ ಡಾ. ಸುಧೀರ್ ಕುಮಾರ್ ಅವರು ಪೋಸ್ಟ್ವೊಂದರಲ್ಲಿ ಕೆಲವು ಅಂಶಗಳಲ್ಲಿ ಪ್ರೊಟೀನ್ ಸೇವನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರೋಟಿನ್ ಗರಿಷ್ಠ ಸೇವನೆಯು ಮೂತ್ರಪಿಂಡಗಳಿಗೆ ಸುರಕ್ಷಿತ. ಸಾಮಾನ್ಯ ಭಾರತೀಯರ ಆಹಾರದಲ್ಲಿ ಅಧಿಕ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳಿದ್ದರೆ, ಪ್ರೋಟೀನ್‌ಗಳ ಪ್ರಮಾಣ ಕಡಿಮೆಯಾಗಿದೆ. ಅಂತಹವರು ದೇಹದ ತೂಕದ ಪ್ರತಿ ಕಿಲೋಗ್ರಾಂಗೆ ಸುಮಾರು 1ಗ್ರಾಂ ಪ್ರೋಟೀನ್ ಸೇವಿಸಲು ಪ್ರಯತ್ನಿಸಿ. ಕೆಲವೊಮ್ಮೆ ನಿಮ್ಮ ದೈಹಿಕ ಚಟುವಟಿಕೆಗಳನ್ನು ಅವಲಂಬಿಸಿ ಅಥವಾ ಯಾವುದಾದರೂ ಅನಾರೋಗ್ಯ ಹೊಂದಿದ್ದರೆ ಪ್ರೋಟೀನ್ ಅಗತ್ಯತೆಗಳು, ಸೇವನೆಗಳು ಬದಲಾಗಬಹುದು ಎಂದು ಅವರು ತಿಳಿಸಿದ್ದಾರೆ.
ತೂಕ ಕಡಿಮೆಗೆ ಪ್ರೋಟೀನ್ ಸಹಕಾರಿ: ತೂಕ ಇಳಿಸಲು ತೆಗೆದುಕೊಳ್ಳುವ ಆಹಾರದಲ್ಲಿ ಕಾರ್ಬೋಹೈಡ್ರೇಟ್‌ಗಳ ಪ್ರಮಾಣ ಕಡಿಮೆಯಿದ್ದು ಪ್ರೋಟೀನ್‌ನ ಪ್ರಮಾಣವು ಹೆಚ್ಚಾಗಿರುತ್ತದೆ ಎಂದು ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ವರದಿಯಲ್ಲಿ ಅಂಗೀಕರಿಸಲಾಗಿದೆ. ಹೀಗಾಗಿ ದೇಹದ ತೂಕ ಕಡಿಮೆಗೆ ಪ್ರೋಟಿನ್ ಸಹಕಾರಿ. ಜತೆಗೆ ತೂಕ ಕಳೆದುಕೊಳ್ಳಬೇಕೆಂದು ಬಯಸುವವರು 25-35 ಪ್ರತಿಶತ ಕ್ಯಾಲೊರಿಗಳನ್ನು ಪ್ರೋಟೀನ್‌ನಿಂದ ಮತ್ತು <45 ಪ್ರತಿಶತ ಕ್ಯಾಲೋರಿಗಳು ಕಾರ್ಬೋಹೈಡ್ರೇಟ್‌ಗಳಿಂದ ಇರಬೇಕು ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಯಾವ ಸಮಯದಲ್ಲಿ ನೀರಿ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು?: ಇಲ್ಲಿದೆ ನೋಡಿ ಮಹತ್ವದ ಮಾಹಿತಿ - Best Time For Drinking Water