ಹೈದರಾಬಾದ್:ಕೋವಿಡ್ 19 ಲಸಿಕೆಯಾಗಿರುವ ಕೋವಾಕ್ಸಿನ್ ಲಸಿಕೆಯು ರಕ್ತ ಹೆಪ್ಪುಗಟ್ಟುವಿಕೆ, ಥ್ರಂಬೋಸೈಟೋಪೆನಿಯಾ, ಟಿಟಿಎಸ್, ವಿಐಟಿಟಿ, ಪೆರಿಕಾರ್ಡಿಟಿಸ್, ಮಯೋಕಾರ್ಡಿಟಿಸ್ ನಂತಹ ಯಾವುದೇ ಅಡ್ಡ ಪರಿಣಾಮದ ಅಪಾಯವನ್ನು ಹೊಂದಿಲ್ಲ. ಇದನ್ನು ಸುರಕ್ಷತೆ, ಪರಿಣಾಮಕಾರಿತ್ವದ ಆದ್ಯತೆಯೊಂದಿಗೆ ಲಸಿಕೆ ಅಭಿವೃದ್ಧಿಪಡಿಸಲಾಗಿದೆ ಎಂದು ಭಾರತ್ ಬಯೋಟೆಕ್ ಹೇಳಿಕೆ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ಜಾಗತಿಕ ಔಷಧ ತಯಾರಿಕಾ ಕಂಪನಿಯಾಗಿರುವ ಅಸ್ಟ್ರಾಜೆನಕಾ, ಆಕ್ಸಫರ್ಡ್ ಯೂನಿವರ್ಸಿಟಿ ಜೊತೆ ಸೇರಿ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಲಸಿಕೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸಂಸ್ಥೆ ಒಪ್ಪಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕೋವಿಡ್ ಲಸಿಕೆ ಸುರಕ್ಷಿತತೆ ಬಗ್ಗೆ ಪ್ರಶ್ನೆ ಮೂಡಿದ್ದು, ಜನರಲ್ಲಿ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಹೈದರಾಬಾದ್ ಮೂಲದ ಕಂಪನಿ ಭಾರತ್ ಬಯೋಟೆಕ್ ಕೋವಾಕ್ಸಿನ್ ಸುರಕ್ಷತೆ ಭರವಸೆ ಕುರಿತು ಈ ಹೇಳಿಕೆ ಬಿಡುಗಡೆ ಮಾಡಿದೆ.
ಅಸ್ಟ್ರಾಜೆನೆಕಾ ಅಭಿವೃದ್ಧಿ ಪಡಿಸಿದ ಮತ್ತು ಪುಣೆ ಮೂಲದ ಸೀರಂ ಇನ್ಸುಟಿಟ್ಯೂಟ್ ತಯಾರಿಸಿದ ಕೋವಿಶೀಲ್ಡ್ನ 175 ಕೋಟಿ ಡೋಸ್ ಅನ್ನು ಭಾರತದಲ್ಲಿ ನಿರ್ವಹಿಸಲಾಗಿದೆ ಎಂದು ವರದಿ ತಿಳಿಸಿದೆ. ಭಾರತ ಸರ್ಕಾರದ ಪ್ರತಿರಕ್ಷಣೆ ಕಾರ್ಯಕ್ರಮದಲ್ಲಿ ಪರಿಣಾಮಕಾರಿ ಪ್ರಯೋಗ ನಡೆಸಿದ ಏಕೈಕ ಕೋವಿಡ್ 19 ಲಸಿಕೆ ಕೋವಾಕ್ಸಿನ್ ಆಗಿದೆ ಎಂದು ಕಂಪನಿ ತಿಳಿಸಿದೆ.