ನವದೆಹಲಿ:ಬೆಳ್ಳುಳ್ಳಿ ಅಡುಗೆ ರುಚಿ ಹೆಚ್ಚಿಸುವ ಜೊತೆಗೆ ಇದರಿಂದ ಆರೋಗ್ಯದ ಪ್ರಯೋಜನ ಇದೆ. ಊರಿಯೂತದ ಗುಣಲಕ್ಷಣ ಹೊಂದಿರುವ ಈ ಸಾಂಪ್ರದಾಯಿಕ ಔಷಧ ಗುಣವಿರುವ ಬೆಳ್ಳುಳ್ಳಿ ಮಧುಮೇಹ ಮತ್ತು ಹೃದಯಾಘಾತ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಇದರ ಪ್ರಯೋಜನ ಪಡೆಯಲು ಪ್ರತಿದಿನ ಬೆಳಗ್ಗೆ ಬೆಚ್ಚಗಿನ ನೀರಿನ ಜೊತೆ ಎರಡು ಎಸಳು ಬೆಳ್ಳುಳ್ಳಿಯನ್ನು ಸೇವಿಸುವುದು ಉತ್ತಮ.
ಈ ನಡುವೆ, 29 ಮೆಟಾ ವಿಶ್ಲೇಷಣೆ ಅಧ್ಯಯನದಲ್ಲಿ ಬಹಿರಂಗವಾದ ಮಾಹಿತಿ ಪ್ರಕಾರ, ಪ್ರತಿದಿನ ಎರಡು ಬೆಳ್ಳುಳ್ಳಿ ಎಸಳನ್ನು ತಿನ್ನುವುದರಿಂದ ಸಾಕಷ್ಟು ಪ್ರಯೋಜನಕಾರಿ ಎಂದು ಕಂಡುಬಂದಿದೆ. ಮಧುಮೇಹ ಮತ್ತು ಹೃದ್ರೋಗದ ಅಪಾಯವನ್ನು ತಡೆಯಲು ಬೆಳ್ಳುಳ್ಳಿ ಸೇವನೆ ಪ್ರಯೋಜನಕಾರಿಯಾಗಿದೆ.
ಬೆಳ್ಳುಳ್ಳಿ ಸೇವನೆಯ ಪ್ರಯೋಜನ:ಉಪವಾಸದ ಸಮಯದಲ್ಲಿ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ರಕ್ತದಲ್ಲಿನ ಗ್ಲುಕೋಸ್ ಮಟ್ಟ ಕಡಿಮೆಯಾಗುತ್ತದೆ. ಇದು ಮಧುಮೇಹ ನಿರ್ವಹಣೆಗೆ ಹಾಗೂ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಪಧಮನಿಯಲ್ಲಿ ಅಭಿವೃದ್ಧಿಯಾಗುವ ಪ್ಲೇಕ್ ತಡೆಯುವ ಜೊತೆಗೆ ಹೃದಯಾಘಾತದ ಅಪಾಯ ಕಡಿಮೆ ಮಾಡುತ್ತದೆ.
ಮೂರು ತಿಂಗಳ ಅಧ್ಯಯನದಲ್ಲಿ ತಿಳಿದುಬಂದ ಮತ್ತೊಂದು ವಿಚಾರ ಎಂದರೆ, ಬೆಳ್ಳುಳ್ಳಿ ಹೆಚ್ಬಿಎ1ಸಿ ಮಟ್ಟವನ್ನು ಸ್ವಲ್ಪ ಕಡಿಮೆ ಮಾಡುತ್ತದೆ. ಜೊತೆಗೆ ಕಡಿಮೆ ಸಾಂದ್ರತೆಯ ಲಿಪೊಪ್ರೋಟಿನ್ ಅಥವಾ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸಹ ನಿಯಂತ್ರಿಸುತ್ತದೆ. ಕೊಲೆಸ್ಟ್ರಾಲ್ ಸಂಶ್ಲೇಷಣೆ ಮತ್ತು ಎಲ್ಡಿಎಲ್ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ.