ನವದೆಹಲಿ: ಆಸ್ಟ್ರೇಲಿಯಾದಲ್ಲಿ ಇದೇ ಮೊದಲ ಬಾರಿಗೆ ಮಾನವರಲ್ಲಿ ಹಕ್ಕಿ ಜ್ವರ ಸೋಂಕು ವರದಿಯಾಗಿದೆ. ಕಳೆದ ಮಾರ್ಚ್ನಲ್ಲಿ ಭಾರತಕ್ಕೆ ಭೇಟಿ ನೀಡಿ ಆಸ್ಟ್ರೇಲಿಯಾಕ್ಕೆ ಮರಳಿದ ಬಾಲಕಿಯಲ್ಲಿ ಏವಿಯನ್ ಇನ್ಫುಯೆಂಜಾ (ಎಚ್5ಎನ್1) ಸೋಂಕು ದೃಢಪಟ್ಟಿದೆ ಎಂದು ಅಲ್ಲಿನ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದಲ್ಲಿ ಸೋಂಕಿಗೆ ತುತ್ತಾಗಿರುವ ಬಾಲಕಿ ವಿಕ್ಟೋರಿಯಾ, ಮಾರ್ಚ್ನಲ್ಲಿ ಆಸ್ಟ್ರೇಲಿಯಾಕ್ಕೆ ಮರಳಿದ್ದಳು. ಅನಾರೋಗ್ಯಕ್ಕೆ ಗುರಿಯಾದ ಆಕೆಯಲ್ಲಿ ಇದೀಗ ಸೋಂಕು ಪತ್ತೆಯಾಗಿದೆ. ಈ ಸೋಂಕು ಸಮುದಾಯಕ್ಕೆ ಹರಡುವ ಸಾಧ್ಯತೆ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಬಾಲಕಿ ಗಂಭೀರ ಸೋಂಕಿನಿಂದ ಬಳಲುತ್ತಿದ್ದಳು. ಈ ವೇಳೆ ಪರೀಕ್ಷೆಗೆ ಒಳಪಡಿಸಿದಾಗ ವೈದ್ಯಕೀಯ ವರದಿಯಲ್ಲಿ ಇನ್ಫುಯೆಂಜಾ ಸೋಂಕಿನ ತಳಿ ಮಾದರಿ ಪತ್ತೆಯಾಗಿದೆ. ಇದೀಗ ಚೇತರಿಸಿಕೊಳ್ಳುತ್ತಿದ್ದಾಳೆ. ಸೋಂಕು ಇತರರಿಗೆ ಹರಡಿರುವ ಕುರಿತು ಬಾಲಕಿ ಸಂಪರ್ಕಕ್ಕೆ ಒಳಗಾದ ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ. ಆದರೆ, ಯಾವುದೇ ಪ್ರಕರಣಗಳು ಕಂಡುಬಂದಿಲ್ಲ ಎಂದು ಮುಖ್ಯ ಆರೋಗ್ಯಾಧಿಕಾರಿ ಡಾ.ಕ್ಲರೆ ಲುಕರ್ ತಿಳಿಸಿದ್ದಾರೆ.
ಈ ಸೋಂಕು ಬಾಲಕಿಯಿಂದ ಇತರರಿಗೆ ಹರಡಿರುವ ಸಂಬಂಧ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ. ಹಕ್ಕಿ ಜ್ವರ ಈ ರೀತಿ ಸುಲಭವಾಗಿ ಮನುಷ್ಯರಿಗೆ ಹರಡುವ ಸಾಧ್ಯತೆ ತುಂಬಾ ಕಡಿಮೆ ಎಂದು ಅವರು ಹೇಳಿದರು.
ಜಾಗತಿಕವಾಗಿ ಎಚ್5ಎನ್1 ಸೋಂಕು ಉಲ್ಬಣಗೊಳ್ಳುತ್ತಿದ್ದು, ಹಲವು ದೇಶಗಳಲ್ಲಿ ಲಕ್ಷಾಂತರ ಕಾಡು ಪಕ್ಷಿಗಳು ಮತ್ತು ಸಾವಿರಾರು ಸಸ್ತನಿಗಳನ್ನು ಕೊಲ್ಲಲಾಗಿದೆ. 2023ರಲ್ಲಿ ದಾಖಲೆ ಮಟ್ಟದಲ್ಲಿ ಎಚ್5ಎನ್1 ಸೋಂಕು ಕಂಡು ಬಂದಿತ್ತು. ನೀರುನಾಯಿಗಳು, ಸಮುದ್ರ ಸಿಂಹಗಳು, ನರಿಗಳು, ಡಾಲ್ಫಿನ್ಗಳು ಮತ್ತು ಸೀಲ್ ಸೇರಿದಂತೆ ಇತರ ಪ್ರಾಣಿ-ಪಕ್ಷಿಗಳಲ್ಲಿ ಸೋಂಕು ಪತ್ತೆಯಾಗಿತ್ತು. ಇತ್ತೀಚೆಗೆ ಅಮೆರಿಕದಲ್ಲಿ ಜಾನುವಾರುಗಳ ಫಾರ್ಮ್ನಲ್ಲಿ ಸೋಂಕು ಪತ್ತೆಯಾಗಿದ್ದು, ಈ ಹಸುಗಳ ಹಾಲಿನ ಪರೀಕ್ಷೆಯಲ್ಲಿ ಎಚ್5ಎನ್1 ಸೋಂಕು ಕಂಡುಬಂದಿತ್ತು.
ಎಚ್5ಎನ್1 ಸೋಂಕು ಇದುವರೆಗೆ ಮನುಷ್ಯರಿಂದ ಮನುಷ್ಯರಿಗೆ ಪ್ರಸರಣವಾಗಿಲ್ಲ. ಡೈರಿ ಜಾನುವಾರುಗಳಿಗೆ ವೈರಸ್ ಹರಡುವಿಕೆಯು ಆತಂಕ ಹೆಚ್ಚಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ತಿಳಿಸಿತ್ತು.
ಜಾಗತಿಕ ಆರೋಗ್ಯ ಸಂಸ್ಥೆಯ ದತ್ತಾಂಶದ ಪ್ರಕಾರ, 2003ರಿಂದ 2023ರವರೆಗೆ ಜಾಗತಿಕವಾಗಿ 21 ದೇಶಗಳಲ್ಲಿ ಇನ್ಫ್ಲುಯೆನ್ಸ್ ಎ ಸೋಂಕು 873 ಮನುಷ್ಯರಲ್ಲಿ ಪತ್ತೆಯಾಗಿದ್ದು, 458 ಸಾವು ವರದಿಯಾಗಿದೆ.
ಜ್ವರ, ಕೆಮ್ಮು, ತಲೆನೋವು, ನೋವು ಸ್ನಾಯುಗಳು, ಉಸಿರಾಟದ ತೊಂದರೆಗಳು, ಕಾಂಜಂಕ್ಟಿವಿಟಿಸ್ ಮತ್ತು ಜಠರಗರುಳಿನ ಸಮಸ್ಯೆಗಳು ಇದರ ಸಾಮಾನ್ಯ ಲಕ್ಷಣಗಳಾಗಿವೆ. ಇದು ತೀವ್ರ ಉಸಿರಾಟದ ಕಾಯಿಲೆ ಮತ್ತು ನರ ಸಂಬಂಧಿ ಬದಲಾವಣೆಗೂ ಕಾರಣವಾಗುತ್ತದೆ. (ಐಎಎನ್ಎಸ್)
ಇದನ್ನೂ ಓದಿ:ಪಕ್ಷಿಗಳ ಸಂಪರ್ಕದಲ್ಲಿರುವ ಮಾನವರಿಗೂ ಹರಡುತ್ತಾ ಹಕ್ಕಿ ಜ್ವರ?