ದರ್ಶನ್ ಭೇಟಿಯಾದ ಪತ್ನಿ ವಿಜಯಲಕ್ಷ್ಮಿ (ETV Bharat) ಬಳ್ಳಾರಿ: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್ನ 2ನೇ ಆರೋಪಿ ನಟ ದರ್ಶನ್ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿದ್ದು ಇಂದು ಪತ್ನಿ ವಿಜಯಲಕ್ಷ್ಮಿ ಜೈಲಿಗೆ ಭೇಟಿ ಕೊಟ್ಟರು. ವಿಜಯಲಕ್ಷ್ಮಿ ಮತ್ತು ವಕೀಲರು ಸುಮಾರು 1 ಗಂಟೆ 5 ನಿಮಿಷಗಳ ಕಾಲ ಜೈಲಿನೊಳಗಿದ್ದರು.
12:15 ಗಂಟೆಗೆ ಜೈಲಿನ ಒಳಹೋದ ವಿಜಯಲಕ್ಷ್ಮಿ ಮತ್ತು ವಕೀಲ 1:20ಕ್ಕೆ ಹೊರಬಂದಿದ್ದಾರೆ. 12:50ಕ್ಕೆ ಹೈ ಸೆಕ್ಯೂರಿಟಿ ಸೆಲ್ಗೆ ಆರೋಪಿ ದರ್ಶನ್ ತೆರಳಿದ ನಂತರ 1.20ಕ್ಕೆ ಇವರು ಹೊರಬಂದಿದ್ದಾರೆ.
ಈ ಭೇಟಿಯ ಬಳಿಕ ದರ್ಶನ್ ಪರ ವಕೀಲ ಸುನೀಲ್ ಮಾತನಾಡಿ, "ಚಾರ್ಜ್‌ಶೀಟ್ ವಿಚಾರದ ಬಗ್ಗೆ ಮಾತನಾಡಿದ್ದೇವೆ. ಜಾಮೀನು ಅರ್ಜಿ ಹಾಕುವ ಬಗ್ಗೆ ಮಾತನಾಡಿಲ್ಲ. ಜೈಲು ಬದಲಾಯಿಸುವ ಬಗ್ಗೆಯೂ ಚರ್ಚಿಸಿಲ್ಲ. ಚಾರ್ಜ್ಶೀಟ್ನಲ್ಲಿ ಏನಿದೆಯೋ ಅದರ ಬಗೆಗಷ್ಟೇ ಚರ್ಚೆ ನಡೆಸಿದ್ದೇವೆ. ಕೆಲವೊಂದಿಷ್ಟು ಗೊಂದಲಗಳಿದ್ದವು, ಆ ಬಗ್ಗೆ ಸ್ಪಷ್ಟನೆ ತೆಗೆದುಕೊಂಡಿದ್ದೇವೆ. ಮತ್ತೆ ಸಂಜೆ 4 ಗಂಟೆಗೆ ಜೈಲಿಗೆ ಬರುತ್ತೇವೆ" ಎಂದು ತಿಳಿಸಿದರು.
ದರ್ಶನ್ ಭೇಟಿಯಾದ ವಕೀಲರು (ETV Bharat) ಇತ್ತೀಚೆಗಷ್ಟೇ ಜೈಲಿಗೆ ಬಂದಿದ್ದ ಪತ್ನಿ ವಿಜಯಲಕ್ಷ್ಮಿ: ವಿಜಯಲಕ್ಷಿ ಅವರ ಭೇಟಿ ಇದೇ ಮೊದಲಲ್ಲ. ಈಗಾಗಲೇ ಎರಡ್ಮೂರು ಬಾರಿ ಬಳ್ಳಾರಿ ಜೈಲಿಗೆ ಭೇಟಿ ಕೊಟ್ಟು ದರ್ಶನ್ ಜೊತೆ ಮಾತುಕತೆ ನಡೆಸಿದ್ದಾರೆ. ಸೆಪ್ಟೆಂಬರ್ 5 ರಂದು ಕೂಡಾ ಪತ್ನಿ ವಿಜಯಲಕ್ಷ್ಮಿ ಜೈಲಿಗೆ ಆಗಮಿಸಿದ್ದರು. ಅಂದು ದರ್ಶನ್ ಸಹೋದರ ದಿನಕರ್, ಸಂಬಂಧಿ ಸುಶಾಂತ್ ನಾಯ್ಡು ಜೊತೆಗಿದ್ದರು. 4.30 ರಿಂದ 5.30ಕ್ಕೆ ವಿಜಿಟರ್ಸ್ಗೆ ಅವಕಾಶವಿದ್ದು, ವಿಸಿಟರ್ಸ್ ಕೊಠಡಿಗೆ ದರ್ಶನ್ ಅವರನ್ನು 4.29ಕ್ಕೆ ಹೈ ಸೆಕ್ಯೂರಿಟಿ ಸೆಲ್ನಿಂದ ಕರೆತರಲಾಯಿತು. ಅರ್ಧ ಗಂಟೆ ಪ್ರಕರಣದ ಕುರಿತು ಮಾತನಾಡಿ ಬಂದಿದ್ದರು. ಒಟ್ಟಾರೆ ಜೈಲು ನಿಯಮಾವಳಿ ಪ್ರಕಾರವೇ ಭೆಟಿಗೆ ಅವಕಾಶ ಮಾಡಿಕೊಡಲಾಗುತ್ತಿದೆ.
ಇದನ್ನೂ ಓದಿ:ಬೃಂದಾವನ ನಟ ವರುಣ್ ವಿರುದ್ಧದ ಪ್ರಕರಣ: ತಪ್ಪು ತಿಳುವಳಿಕೆಯಿಂದ ದೂರು ನೀಡಿದೆ ಎಂದ ಯುವತಿ - Actor Varun Aradya Case
ಚಾರ್ಜ್‌ಶೀಟ್ ಪ್ರಸಾರಕ್ಕೆ ನಿರ್ಬಂಧ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಕೆ ಮಾಡಿದ್ದರು. ಕೇಸ್ನ ತನಿಖೆ ನಡೆಸುತ್ತಿರುವ ಪೊಲೀಸರು ಸೆಪ್ಟೆಂಬರ್ 4 ರಂದು 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ನಂತರ ಚಾರ್ಜ್‌ಶೀಟ್ ಅಂಶಗಳು ವೈರಲ್ ಆಗಲು ಶುರುವಾದವು. ಆರೋಪಪಟ್ಟಿಯ ಯಾವುದೇ ಅಂಶಗಳನ್ನು ಪ್ರಸಾರ ಮಾಡದಂತೆ ಮಾಧ್ಯಮ ಸಂಸ್ಥೆಗಳ ಮೇಲೆ ನಿರ್ಬಂಧ ಹೇರುವಂತೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ ಚಾರ್ಜ್ಶೀಟ್ನಲ್ಲಿ ಉಲ್ಲೇಖ ಆಗಿರುವ ಯಾವುದೇ ರಹಸ್ಯ ಮಾಹಿತಿಯನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿ ಆದೇಶಿಸಿತು.
ಇದನ್ನೂ ಓದಿ:ದರ್ಶನ್ ಭೇಟಿಯಾದ ವಿಜಯಲಕ್ಷ್ಮಿ: ಜೈಲು ಮುಂದೆ ಮಹಿಳಾ ಅಭಿಮಾನಿಯ ಹೈಡ್ರಾಮಾ - Vijayalakshmi met Darshan