ನವೆಂಬರ್ 29, ಶುಕ್ರವಾರದಂದು ದಕ್ಷಿಣ ಚಿತ್ರರಂಗದ ಖ್ಯಾತ ತಾರೆ ಸಮಂತಾ ರುತ್ ಪ್ರಭು ಅವರ ತಂದೆ ಜೋಸೆಫ್ ಪ್ರಭು ಇಹಲೋಕ ತ್ಯಜಿಸಿದರು. ಜನಪ್ರಿಯ ತಟಿಯ ತಂದೆಯಾಗಿದ್ರೂ, ಈವರೆಗೆ ಅವರ ವಿಷಯಗಳು ಹೆಚ್ಚಾಗಿ ಹೊರಬೀಳಲಿಲ್ಲ. ನಟಿಯೊಂದಿಗೆ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ಅಂತರ ಕಾಯ್ದುಕೊಂಡಿದ್ದರು. ತಮ್ಮ ಮಗಳ ಸೂಪರ್ ಸ್ಟಾರ್‌ಡಮ್ ಹೊರತಾಗಿಯೂ 'ಸಾರ್ವಜನಿಕರ ಗಮನ'ದಿಂದ ದೂರ ಉಳಿಯಲು ನಿರ್ಧರಿಸಿದ ಕಾರಣವನ್ನು ಅವರು ಒಮ್ಮೆ ಬಹಿರಂಗಪಡಿಸಿದ್ದರು. ಸದ್ಯ ಈ ಬಗ್ಗೆ ಹೆಚ್ಚಿನವರು ಗಮನ ಹರಿಸಿದ್ದಾರೆ.
2023ರಲ್ಲಿ, ಫೇಸ್‌ಬುಕ್‌ನಲ್ಲಿ ಅಭಿಮಾನಿಯೊಬ್ಬರು ಸಮಂತಾ ಅವರೊಂದಿಗೆ ಈವೆಂಟ್‌ಗಳಲ್ಲಿ ಏಕೆ ಕಾಣಿಸಿಕೊಳ್ಳುವುದಿಲ್ಲ ಎಂದು ಜೋಸೆಫ್ ಪ್ರಭು ಬಳಿ ಪ್ರಶ್ನಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಅವರು, ''ನಾನು ಸೆಲೆಬ್ರಿಟಿಗಳೊಂದಿಗೆ ಕಾಣಿಸಿಕೊಳ್ಳಲು ಇಷ್ಟಪಡುವುದಿಲ್ಲ'' ಎಂದು ಪ್ರಾಮಾಣಿಕ ಉತ್ತರ ನೀಡಿದ್ದರು. ಅವರ ಈ ಪ್ರತಿಕ್ರಿಯೆಯು, ಮಗಳು ಭಾರತದ ಅತ್ಯಂತ ಸುಪ್ರಸಿದ್ಧ ನಟಿಯರಲ್ಲಿ ಒಬ್ಬರಾಗಿದ್ದರೂ ಕೂಡಾ ಅವರ ನಮ್ರತೆ ಮತ್ತು ಖಾಸಗಿ ಜೀವನಕ್ಕೆ ಕೊಟ್ಟ ಅವರ ಆದ್ಯತೆಯನ್ನು ಒತ್ತಿ ಹೇಳಿದೆ.
ಜೋಸೆಫ್ ಪ್ರಭು ಹೆಚ್ಚು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಇಚ್ಛಿಸಲಿಲ್ಲ ಎಂಬುದು ಇದರಲ್ಲಿ ನಮಗೆ ತಿಳಿಯುತ್ತದೆ. ಸಮಂತಾ ತಮ್ಮ ಪೋಷಕರಾದ ಜೋಸೆಫ್ ಮತ್ತು ನಿನೆಟ್ ಹಾಗೂ ಸಹೋದರರಾದ ಜೊನಾಥನ್ ಮತ್ತು ಡೇವಿಡ್ ಅವರೊಂದಿಗೆ ಚೆನ್ನೈ ಮೂಲದ ಕುಟುಂಬದಲ್ಲಿ ಬೆಳೆದರು. ಸಮಂತಾ ಆಗಾಗ್ಗೆ ತಮ್ಮ ವ್ಯಕ್ತಿತ್ವ ರೂಪುಗೊಂಡಿರುವುದರ ಹಿಂದೆ ತಮ್ಮ ಕುಟುಂಬ ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಿದ್ದಾರೆ. ತಂದೆಯ ಕಟ್ಟುನಿಟ್ಟಿನ ವರ್ತನೆಯು ತಮ್ಮ ಜೀವನದಲ್ಲಿ ಗಮನಾರ್ಹ ಪ್ರಭಾವ ಬೀರಿದೆ ಎಂದು ಕೂಡಾ ತಿಳಿಸಿದ್ದಾರೆ.
ಕಳೆದ ಸಂಜೆ ನಟಿ ತಮ್ಮ ತಂದೆಯ ನಿಧನದ ಸುದ್ದಿಯನ್ನು ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ತಿಳಿಸಿದರು. ಹಾರ್ಟ್ಬ್ರೇಕ್ ಎಮೋಜಿಯೊಂದಿಗೆ "ನಾವು ಮತ್ತೆ ಭೇಟಿಯಾಗುವವರೆಗೆ, ಡ್ಯಾಡ್'' ಎಂದು ಬರೆದುಕೊಂಡಿದ್ದರು. ಸಿನಿಮಾ ಸಹುದ್ಯೋಗಿಗಳು ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಸಂತಾಪ ಸೂಚಿಸಿದ್ದಾರೆ.