ಸೌತ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರ ಕಳೆದ 24 ಗಂಟೆಗಳ ಅನುಭವ ಬಹುತೇಕರ ಆಶ್ಚರ್ಯಕ್ಕೆ ಕಾರಣವಾಗಿತ್ತು. ಬಹುತೇಕ ಸಿನಿಮಾ ಸ್ಕ್ರಿಪ್ಟ್‌ನಂತೆ ತೋರಿದ ದೃಶ್ಯಗಳನ್ನು ಖುದ್ದು ಜನಪ್ರಿಯ ತಾರೆ ಅನುಭವಿಸಿ ಬಂದಿದ್ದಾರೆ. ಪುಷ್ಪ ಚಿತ್ರದ ಮೂಲಕ ರಾಷ್ಟ್ರವ್ಯಾಪಿ ಖ್ಯಾತಿ ಗಳಿಸಿರುವ ನಟ, ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ದುರಂತ ಘಟನೆಗೆ ಸಂಬಂಧಿಸಿದಂತೆ ಜೈಲಿಗೆ ಹೋಗಿ ಬಂದಿದ್ದಾರೆ.
14 ದಿನಗಳ ನ್ಯಾಯಾಂಗ ಬಂಧನ ಘೋಷಣೆಯಾದ ಬೆನ್ನಲ್ಲೇ ಅಲ್ಲು ಅರ್ಜುನ್ ಅವರಿಗೆ ತೆಲಂಗಾಣ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಜೈಲಿನಲ್ಲಿ ಒಂದು ರಾತ್ರಿ ಕಳೆದು, ಇಂದು ಬೆಳಗ್ಗೆ ಹೈದರಾಬಾದ್ ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಈ ಘಟನೆ ಮಿಶ್ರ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ.
ಮನೆಗೆ ಮರಳಿದ ಅಲ್ಲು ಅರ್ಜುನ್ (Video: ETV Bharat) ಅಲ್ಲು ಅರ್ಜುನ್ನನ್ನು ಬಿಗಿದಪ್ಪಿದ ಪತ್ನಿ, ಮಕ್ಕಳು: ಇಂದು ಬೆಳಗ್ಗೆ ಅಲ್ಲು ಅರ್ಜುನ್ ಅವರು ತಮ್ಮ ನಿವಾಸಕ್ಕೆ ಮರಳುತ್ತಿದ್ದಂತೆ, ಪತ್ನಿ ಅಲ್ಲು ಸ್ನೇಹಾ ರೆಡ್ಡಿ ಬಹಳ ಭಾವುಕರಾದರು. ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋಗಳಲ್ಲಿ, ಸ್ನೇಹಾ ತಮ್ಮ ಮಕ್ಕಳೊಂದಿಗೆ ಹೊರಗೆ ಕಾಯುತ್ತಿರುವುದನ್ನು ಕಾಣಬಹುದು. ಅಲ್ಲು ಅರ್ಜುನ್ ಅವರ ಬಳಿಗೆ ಬರುತ್ತಿದ್ದಂತೆ, ಸ್ನೇಹಾ ಅವರನ್ನು ಬಿಗಿಯಾಗಿ ಅಪ್ಪಿಕೊಂಡರು, ಜೊತೆಗೆ ಬಹಳ ಭಾವುಕರಾದರು. ನಂತರ ಮಕ್ಕಳು ಸಹ ಅಪ್ಪನನ್ನು ಅಪ್ಪಿಕೊಂಡು ಪ್ರೀತಿ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಪೊಲೀಸರು ನಟನನ್ನು ವಿಚಾರಣೆಗೆ ಕರೆದೊಯ್ಯುವ ಕೆಲ ಕ್ಷಣಕ್ಕೂ ಮುನ್ನ, ಅಲ್ಲು ಅರ್ಜುನ್ ಅವರು ಪತ್ನಿ ಸ್ನೇಹಾರ ಕೆನ್ನೆಗೆ ಮುತ್ತಿಟ್ಟು, ಅವರ ಮುಖವನ್ನು ಮೃದುವಾಗಿ ಹಿಡಿದು ಸಮಾಧಾನಪಡಿಸಿದರು. ಭಾರೀ ಒತ್ತಡದ ಪರಿಸ್ಥಿತಿ ಮತ್ತು ಮಾಧ್ಯಮಗಳ ಹೊರತಾಗಿಯೂ ಸ್ನೇಹಾ ಅವರು ಪತಿ ಪಕ್ಕದಲ್ಲಿ ನಿಂತು, ಪ್ರಬುದ್ಧತೆಯಿಂದ ಪರಿಸ್ಥಿತಿ ನಿಭಾಯಿಸಲು ಪ್ರಯತ್ನಿಸಿರುವುದು ಕಂಡುಬಂದಿದೆ.
ರಶ್ಮಿಕಾ ಮಂದಣ್ಣ ಹೇಳಿದ್ದಿಷ್ಟು:ಕಳೆದ ದಿನ ಟ್ವೀಟ್ ಮಾಡಿದ್ದ ಬ್ಲಾಕ್ಬಸ್ಟರ್ ಪುಷ್ಪ ಚಿತ್ರದ ಸಹನಟಿ ರಶ್ಮಿಕಾ ಮಂದಣ್ಣ, ''ನಾನೀಗ ನೋಡುತ್ತಿರುವುದನ್ನು ನಂಬಲು ಸಾಧ್ಯವಿಲ್ಲ. ನಡೆದಿರುವ ಘಟನೆ ದುರದೃಷ್ಟಕರ ಮತ್ತು ದುಃಖಕರ. ಆದರೆ, ಎಲ್ಲವನ್ನೂ ಒಬ್ಬ ವ್ಯಕ್ತಿಯ ಮೇಲೆಯೇ ದೂಷಿಸುತ್ತಿರುವುದು ಬೇಸರದ ಸಂಗತಿ. ಈ ಪರಿಸ್ಥಿತಿಯನ್ನು ನಂಬಲಾಗುತ್ತಿಲ್ಲ ಮತ್ತು ಹೃದಯವಿದ್ರಾವಕವಾಗಿದೆ'' ಎಂದು ತಿಳಿಸಿದರು.
ಡಿಸೆಂಬರ್ 4ರಂದು ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ಪುಷ್ಪ 2: ದಿ ರೂಲ್ ಅದ್ಧೂರಿಯಾಗಿ ತೆರೆಗಪ್ಪಳಿಸಿತು. ಅಲ್ಲು ಅರ್ಜುನ್ ತಮ್ಮ ಬಹುನಿರೀಕ್ಷಿತ ಚಿತ್ರದ ಪ್ರೀ ಶೋಗಾಗಿ ಡಿ.4ರ ಮಧ್ಯರಾತ್ರಿ ಸಂಧ್ಯಾ ಥಿಯೇಟರ್‌ಗೆ ಭೇಟಿ ನೀಡಿದ್ದರು. ಅಂದು ಸಂಭವಿಸಿದ ದುರದೃಷ್ಟಕರ ಘಟನೆಯಿಂದಾಗಿ ಇವೆಲ್ಲವೂ ಶುರುವಾಯಿತು. ಅಂದು ತಮ್ಮ ಮೆಚ್ಚಿನ ತಾರೆಯನ್ನು ನೋಡಲು ಅಪಾರ ಸಂಖ್ಯೆಯ ಜನರು ಬಂದು ಸೇರಿದ್ದರು. ಪೊಲೀಸರ ಪ್ರಕಾರ, ಜನಸಂದಣಿಯಲ್ಲಾದ ಕಾಲ್ತುಳಿತದಲ್ಲಿ ರೇವತಿ ಎಂಬ ಮಹಿಳೆ ಸಾವನ್ನಪ್ಪಿದ್ದು, ಆಕೆಯ ಮಗ ಗಾಯಗೊಂಡನು. ಹಾಗಾಗಿ ನಟನ ಮೇಲೆ ಆರೋಪಗಳು ಕೇಳಿಬಂದು, ಪ್ರಕರಣ ದಾಖಲಾಯಿತು.
ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ, ನಟನನ್ನು ತೆಲಂಗಾಣದ ಕೆಳ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತು. ಅದಾಗ್ಯೂ, ಅವರ ಕಾನೂನು ತಂಡ ಈ ತೀರ್ಪನ್ನು ಪ್ರಶ್ನಿಸಿತು ಮತ್ತು ತೆಲಂಗಾಣ ಹೈಕೋರ್ಟ್ 50,000 ರೂ. ಬಾಂಡ್ ಷರತ್ತಿನ ಮೇಲೆ ಅವರಿಗೆ ಮಧ್ಯಂತರ ಜಾಮೀನು ನೀಡಿತು. ಅದಾಗ್ಯೂ, ನಟ ಇಂದು ಬೆಳಗ್ಗೆ ಬಿಡುಗಡೆ ಆಗಿದ್ದು, ಅದಕ್ಕೂ ಮೊದಲು ಒಂದು ರಾತ್ರಿ ಜೈಲಿನಲ್ಲಿ ಕಳೆಯುವಂತಾಯಿತು.
ಇದನ್ನೂ ಓದಿ:ಚಂಚಲಗುಡ ಜೈಲಿನಿಂದ ಅಲ್ಲುಅರ್ಜುನ್ ಬಿಡುಗಡೆ: ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ನಟ
ಚಂಚಲಗುಡ ಜೈಲಿನಿಂದ ಹೊರಬಂದು ಜುಬಿಲಿ ಹಿಲ್ಸ್‌ನಲ್ಲಿರುವ ತಮ್ಮ ನಿವಾಸಕ್ಕೆ ವಾಪಸ್ ಆದರು. ಕುಟುಂಬ ಸದಸ್ಯರನ್ನು ಮಾತನಾಡಿಸಿ, ನಮತರ ಮಾಧ್ಯಮಗಳೊಂದಿಗೆ ತಮ್ಮ ಮನದಾಳ ಹಂಚಿಕೊಂಡರು. ಈ ವೇಳೆ, ಘಟನೆ ಉದ್ದೇಶಪೂರ್ವಕವಲ್ಲ ಎಂದು ಪುನರುಚ್ಚರಿಸಿದರು. ಜೊತೆಗೆ, ಸಂತ್ರಸ್ತೆ ಕುಟುಂಬಕ್ಕೆ ತಮ್ಮ ಸಂತಾಪ ವ್ಯಕ್ತಪಡಿಸಿದರು. "ಸಂತ್ರಸ್ತರ ಕುಟುಂಬಕ್ಕೆ ಉಂಟಾದ ನಷ್ಟವನ್ನು ಸರಿಪಡಿಸಲಾಗದು, ಆದ್ರೆ ನನ್ನ ಹೃದಯವು ಅವರಿಗಾಗಿ ಮಿಡಿಯುತ್ತದೆ" ಎಂದು ತೆಲುಗಿನಲ್ಲಿ ತಿಳಿಸಿದರು. ಜೊತೆಗೆ, "ನಾನು 20 ವರ್ಷಗಳಿಗೂ ಹೆಚ್ಚು ಕಾಲದಿಂದ ಚಿತ್ರಮಂದಿರಗಳಿಗೆ ಹೋಗುತ್ತಿದ್ದೇನೆ. ಆದರೆ ಇಂಥ ಘಟನೆಯನ್ನು ಎಂದಿಗೂ ಎದುರಿಸಿಲ್ಲ. ಇದು ಅನಿರೀಕ್ಷಿತ ಮತ್ತು ದುರದೃಷ್ಟಕರ ಘಟನೆ" ಎಂದು ಬೇಸರ ಹೊರ ಹಾಕಿದರು.
ಇದನ್ನೂ ಓದಿ:ನಟ ಅಲ್ಲು ಅರ್ಜುನ್‌ಗೆ ರಿಲೀಫ್: ಮಧ್ಯಂತರ ಜಾಮೀನು ನೀಡಿದ ತೆಲಂಗಾಣ ಹೈಕೋರ್ಟ್
ಅಲ್ಲು ಅರ್ಜುನ್ ತಮ್ಮ ಅಭಿಮಾನಿಗಳು ಮತ್ತು ಹಿತೈಷಿಗಳಲ್ಲಿ ನಾನು ಚೆನ್ನಾಗಿದ್ದೇನೆ ಎಂದು ತಿಳಿಸಿದ್ದಾರೆ. ಜೊತೆಗೆ ತಮ್ಮ ಬಗ್ಗೆ ಚಿಂತಿಸಬೇಡಿ ಎಂದು ಕೇಳಿಕೊಂಡಿದ್ದಾರೆ. "ಪ್ರೀತಿ ಮತ್ತು ವಾತ್ಸಲ್ಯದಿಂದ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ನಾನು ಕಾನೂನು ಪಾಲಿಸುವ ಓರ್ವ ನಾಗರಿಕ ಮತ್ತು ನಾನು ನ್ಯಾಯವನ್ನು ನಂಬುತ್ತೇನೆ. ನಾನು ಚೆನ್ನಾಗಿದ್ದೇನೆ. ಯಾರೂ ಚಿಂತಿಸಬೇಡಿ'' ಎಂದು ನಟ ತಿಳಿಸಿದರು.