ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ನಟ ಶಿವರಾಜ್ಕುಮಾರ್ ಬುಧವಾರ ಸಂಜೆ ಅಮೆರಿಕ ದೇಶಕ್ಕೆ ಪ್ರಯಾಣ ಬೆಳೆಸಿದ್ದರು. ಕಳೆದ ರಾತ್ರಿ ಸಾಗರೋತ್ತರ ದೇಶವನ್ನು ತಲುಪಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿರುವುದು ನಿಮಗೆ ತಿಳಿದೇ ಇದೆ. ನಟಸಾರ್ವಭೌಮ ರಾಜ್ಕುಮಾರ್ ಪುತ್ರ ತಮ್ಮ ಅಮೋಘ ಅಭಿನಯ, ಸಿನಿಮಾ ಮೇಲಿನ ಒಲವು, ಅಭಿಮಾನಿಗಳೊಂದಿಗಿನ ಒಡನಾಟದಿಂದಾಗಿ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಸೂಪರ್ ಸ್ಟಾರ್ಡಮ್ ಗಿಟ್ಟಿಸಿಕೊಂಡಿರುವ ತಾರೆ ತಮ್ಮೆಲ್ಲಾ ಬದ್ಧತೆಗಳನ್ನು ಪೂರ್ಣಗೊಳಿಸಿ, ವಿದೇಶಕ್ಕೆ ತೆರಳಿದ್ದಾರೆ.
ಫ್ಲೋರಿಡಾದಲ್ಲಿರುವ ಮಿಯಾಮಿಯಲ್ಲಿ ಡಿಸೆಂಬರ್ 24ರ ಮಂಗಳವಾರದಂದು ಶಿವಣ್ಣನಿಗೆ ಸರ್ಜರಿ ನಡೆಯಲಿದೆ. ಸೂಕ್ತ ಚಿಕಿತ್ಸೆ ಪಡೆದು ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ಜನವರಿ 25ರಂದು ಅಲ್ಲಿಂದ ಹೊರಟು 26ಕ್ಕೆ ವಾಪಸಾಗಲಿದ್ದಾರೆ.
ಶಿವರಾಜ್ಕುಮಾರ್ ಯುಎಸ್ ಪ್ರಯಾಣ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಚಿತ್ರರಂಗ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಬುಧವಾರದಂದು ಭೇಟಿ ಕೊಟ್ಟು ಗುಣಮಟ್ಟದ ಸಮಯ ಕಳೆದಿದ್ದರು. ಸಿನಿಮಾ, ರಾಜಕೀಯ ಗಣ್ಯರು ಒಂದೇ ಸೂರಿನಡಿ ಸೇರಿ ಉಭಯ ಕುಶಲೋಪರಿ ವಿಚಾರಿಸಿಕೊಂಡಿದ್ದರು. ನಟ ಕಿಚ್ಚ ಸುದೀಪ್, ಮಾಜಿ ಸಚಿವ ಬಿ.ಸಿ.ಪಾಟೀಲ್, ಸಚಿವ ಮಧು ಬಂಗಾರಪ್ಪ ಸೇರಿದಂತೆ ಹಲವು ಗಣ್ಯರಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ಅದರಲ್ಲೂ ಕಿಚ್ಚ ಸುದೀಪ್ ಭಾವುಕರಾದ ಕ್ಷಣ, ಶಿವಣ್ಣನನ್ನು ಅಪ್ಪಿಕೊಂಡಿದ್ದ ಫೋಟೋ ಕಂಡ ಅಭಿಮಾನಿಗಳು ಮರುಗಿದ್ದರು.