ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಹಾಗೂ ಸ್ಟಾರ್ ನಟಿ ಅನುಷ್ಕಾ ಶರ್ಮಾ ಪವರ್ ಫುಲ್ ಕಪಲ್. ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಇಬ್ಬರು ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇದೀಗ ವಿರುಷ್ಕಾ ಜೋಡಿ ಪಾಪರಾಜಿಗಳಿಗೆ (ಸೆಲೆಬ್ರಿಟಿಗಳ ಫೋಟೋ-ವಿಡಿಯೋ ಕ್ಲಿಕ್ಕಿಸಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವವರು) ಧನ್ಯವಾದ ಅರ್ಪಿಸಿ, ಉಡುಗೊರೆಗಳನ್ನು ಕಳುಹಿಸಿದ್ದಾರೆ.
'ವಿರುಷ್ಕಾ' ಎಂದೇ ಖ್ಯಾತರಾದ ಈ ಜನಪ್ರಿಯ ದಂಪತಿ ತಮ್ಮ ಮಕ್ಕಳ ಖಾಸಗಿತನದ ಬಗ್ಗೆ ಬಹಳ ಜಾಗರೂಕರಾಗಿದ್ದಾರೆ. ಇತ್ತೀಚೆಗಷ್ಟೇ ದಂಪತಿ ತಮ್ಮ ಎರಡನೇ ಮಗುವನ್ನು ಬರಮಾಡಿಕೊಂಡಿದ್ದು, ಮಗನಿಗೆ ಅಕಾಯ್ ಎಂದು ಹೆಸರಿಟ್ಟಿದ್ದಾರೆ. ಗರ್ಭಾವಸ್ಥೆ ವಿಚಾರವನ್ನು ರಹಸ್ಯವಾಗಿಡಲು ಮಾಧ್ಯಮಗಳು ಮತ್ತು ಪಾಪರಾಜಿಗಳಲ್ಲಿ ದಂಪತಿ ಮನವಿ ಮಾಡಿಕೊಂಡಿದ್ದರು. ಮಾಧ್ಯಮ ಮತ್ತು ಪಾಪರಾಜಿಗಳ ಈ ವಿಶೇಷ ಸಹಕಾರಕ್ಕಾಗಿ, ದಂಪತಿ ಅವರಿಗೆ ಧನ್ಯವಾದ ಪತ್ರದೊಂದಿಗೆ ದೊಡ್ಡ ಗಿಫ್ಟ್ ಬಾಕ್ಸ್ ಕಳುಹಿಸಿದ್ದಾರೆ. ಇದರ ಒಂದು ನೋಟ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ.
ಪಾಪರಾಜಿ ಸೋಷಿಯಲ್ ಮೀಡಿಯಾ ಅಕೌಂಟ್ನಿಂದ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೋಡಿಯ ಈ ವಿಶೇಷ ಸತ್ಕಾರದ ವಿಡಿಯೋ ಶೇರ್ ಆಗಿದೆ. ಕೃತಜ್ಞತಾ ಉಡುಗೊರೆಯ ವಿಡಿಯೋವನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಸಖತ್ ಸದ್ದು ಮಾಡುತ್ತಿದೆ. ಕ್ಲಿಪ್‌ನಲ್ಲಿ ಕೆಲ ಗಿಫ್ಟ್ ಐಟಂಗಳೊಂದಿಗೆ ಧನ್ಯವಾದ ಪತ್ರವನ್ನೂ ಸಹ ಕಾಣಬಹುದು.
ವಿಡಿಯೋ ಧನ್ಯವಾದ ಪತ್ರದೊಂದಿಗೆ ಪ್ರಾರಂಭವಾಗುತ್ತದೆ. 'ನಮ್ಮ ಮಕ್ಕಳ ಗೌಪ್ಯತೆಯನ್ನು ಗೌರವಿಸಿದ್ದಕ್ಕಾಗಿ ಮತ್ತು ಯಾವಾಗಲೂ ಸಹಕಾರ ನೀಡಿದ್ದಕ್ಕಾಗಿ ಧನ್ಯವಾದಗಳು. ಪ್ರೀತಿಯಿಂದ, ಅನುಷ್ಕಾ ಮತ್ತು ವಿರಾಟ್' ಎಂದು ಅದರಲ್ಲಿ ಬರೆಯಲಾಗಿದೆ. ನಂತರ, ಸುಂದರ ಗಿಫ್ಟ್ ಬಾಕ್ಸ್ ತೋರಿಸಲಾಗಿದೆ. ಅದರಲ್ಲಿ ಕೆಲ ಗ್ಯಾಜೆಟ್ಸ್, ಬ್ಯಾಗ್‌ನೊಂದಿಗೆ ಬಾಟಲ್ ಇದೆ. ಈ ಉಡುಗೊರೆಗಾಗಿ ಪಾಪರಾಜಿಗಳು ಸ್ಟಾರ್ ದಂಪತಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.