ಟೈಟಲ್, ಟೀಸರ್, ಟ್ರೇಲರ್, ಪೋಸ್ಟರ್ಗಳಿಂದ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದ್ದ ದೊಡ್ಮನೆ ಕುಡಿ ವಿನಯ್ ರಾಜ್ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಪೆಪೆ' ಇಂದು ರಾಜ್ಯಾದ್ಯಂತೆ ಬಿಡುಗಡೆ ಆಗಿದ್ದು, ಸಿನಿಪ್ರೇಮಿಗಳಿಂದ ಬಹುತೇಕ ಮೆಚ್ಚುಗೆ ಗಳಿಸಿದೆ. 'ಪೆಪೆ' ವಿನಯ್ ರಾಜ್ಕುಮಾರ್ ಸಿನಿ ಕೆರಿಯರ್ನಲ್ಲಿ ಔಟ್ ಅಂಡ್ ಔಟ್ ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿರುವ ಕಲ್ಟ್ ಕ್ಲಾಸಿಕ್ ಸಿನಿಮಾ.
ಚಿತ್ರದಲ್ಲಿ ಸರಸ್ವತಿಗೆ ಪೂಜೆ ಮಾಡುತ್ತೇವೆ, ಆದ್ರೆ ನಮ್ಮ ಮನೆಯ ಹೆಣ್ಣು ಮಕ್ಕಳಿಗೆ ಓದುವುದಕ್ಕೆ ಕಳಿಸೋದಿಲ್ಲ. ಚಾಮುಂಡೇಶ್ವರಿ ದೇವರಿಗೆ ರಕ್ತ ಕೊಡುತ್ತೇವೆ. ಆದ್ರೆ ಸಂಪ್ರದಾಯ ಕುಟುಂಬದಲ್ಲಿ ರಕ್ತ ಮುಟ್ಟೋಲ್ಲ ಎಂಬ ಸೂಕ್ಷ್ಮ ವಿಷಯಗಳ ಬಗ್ಗೆ ಹೇಳಲಾಗಿದೆ. ಜೊತೆಗೆ ಜಾತಿ ವ್ಯವಸ್ಥೆ, ನೀರಿನ ತೊರೆ ವಿಚಾರಕ್ಕಾಗಿ ಎರಡು ಊರುಗಳ ಮಧ್ಯೆ ತಲತಲಾಂತರದಿಂದ ನಡುವೆ ನಡೆಯುವ ಗಲಾಟೆ, ಊರಿನ ಜನ ಹಾಗೂ ತಂದೆಯ ಸಾವಿಗೆ ಕಾರಣವಾದ ಹಣವಂತರ ವಿರುದ್ಧ ಹೋರಾಡುವ ಕಥೆಯನ್ನು ಈ 'ಪೆಪೆ' ಒಳಗೊಂಡಿದೆ.
ಈವರೆಗೆ ಲವರ್ ಬಾಯ್ ಇಮೇಜ್ನಿಂದಲೇ ಕನ್ನಡಿಗರ ಮನಗೆದ್ದಿದ್ದ ವಿನಯ್ ರಾಜ್ಕುಮಾರ್ ಇದೇ ಮೊದಲ ಬಾರಿಗೆ ಮಾಸ್ ಪಾತ್ರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಂದ ಶಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಸೂಕ್ಷ್ಮ ನಟನೆ ಹಾಗೂ ಆ್ಯಕ್ಷನ್ ಸಿಕ್ವೇನ್ಸ್ನಲ್ಲಿ ಕಾಣಿಸಿಕೊಳ್ಳುವ ಮೂಲಕ ವಿನಯ್ ರಾಜ್ಕುಮಾರ್ ಕ್ಲಾಸ್ಗೂ ಸೈ ಮಾಸ್ಗೂ ಸೈ ಎಂಬುದನ್ನು ಸಾಬೀತುಪಡಿಸಿದ್ದಾರೆ.
ವಿನಯ್ ರಾಜ್ಕುಮಾರ್ ಜೋಡಿಯಾಗಿ ಕಾಜಲ್ ಕುಂದರ್ ನಟಿಸಿದ್ದು, ಟೀಚರ್ ಪಾತ್ರದಲ್ಲಿ ಇಷ್ಟ ಆಗುತ್ತಾರೆ. ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿ ಪೋಷಕ ನಟ ಕಿಟ್ಟಿ ಈ ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ವಿನಯ್ ತಾಯಿಯಾಗಿ ಅರುಣಾ ಬಾಲರಾಜ್ ಹಾಗೂ ಮಯೂರ್ ಪಟೇಲ್ ಮಾವನ ಪಾತ್ರದಲ್ಲಿ ಮಿಂಚಿದ್ದಾರೆ. ಉಳಿದಂತೆ ಯಶ್ ಶೆಟ್ಟಿ, ಬಾಲ ರಾಜ್ ವಾಡಿ, ಸಂಧ್ಯಾ ಅರಕೆರೆ, ಶಿವು, ಮೇದಿನಿ ಕೆಳಮನೆ ನಟರು ತಮ್ಮ ಪಾತ್ರಗಳಲ್ಲಿ ಗಮನ ಸೆಳೆದಿದ್ದಾರೆ.