2023ರ ಯಶಸ್ವಿ ಚಿತ್ರಗಳಲ್ಲೊಂದಾದ '12th ಫೇಲ್'ನ ನಾಯಕ ನಟ ವಿಕ್ರಾಂತ್ ಮಾಸ್ಸೆ ಮತ್ತು ಶೀತಲ್ ಠಾಕೂರ್ 2022ರಲ್ಲಿ ದಾಂಪತ್ಯ ಜೀವನ ಆರಂಭಿಸಿದ್ದರೆ. ಅದಕ್ಕೂ ಮುನ್ನ ಕೆಲ ವರ್ಷಗಳ ಕಾಲ ಡೇಟಿಂಗ್ನಲ್ಲಿದ್ದರು. ಈ ವರ್ಷಾರಂಭದಲ್ಲಿ ಪೋಷಕರಾಗಿ ಭಡ್ತಿ ಪಡೆದಿದ್ದಾರೆ. ತಮ್ಮ ಗಂಡು ಮಗುವಿಗೆ 'ವರ್‌ದಾನ್' (Vardaan) ಎಂದು ಹೆಸರಿಟ್ಟಿದ್ದಾರೆ. ಇದೀಗ ತಂದೆ ವಿಕ್ರಾಂತ್ ಮಾಸ್ಸೆ ತಮ್ಮ ಮೊದಲ ಮಗುವಿನ ಹೆಸರಿನ ಟ್ಯಾಟೂ ಹಾಕಿಸಿಕೊಂಡು ಗಮನ ಸೆಳೆದಿದ್ದಾರೆ. ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲೀಗ ಈ ಟ್ಯಾಟೂವಿನದ್ದೇ ಸದ್ದು.
ಕಳೆದ ಫೆಬ್ರವರಿ 7ರಂದು ಮಗು ಜನಿಸಿದಾಗಿನಿಂದ ಮನೆಯಲ್ಲಿ ಸಂತಸವೋ ಸಂತಸ. ಪ್ರೀತಿ, ಉತ್ಸಾಹ ದುಪ್ಪಟ್ಟಾಗಿದೆ. 'ಮಿರ್ಜಾಪುರ್' ಸಿನಿಮಾ ನಟ ತಮ್ಮ ಮಗನ ಮೇಲಿನ ಪ್ರೀತಿಯನ್ನು ವಿಶೇಷವಾಗಿ ವ್ಯಕ್ತಪಡಿಸಿದ್ದಾರೆ. ಮಗುವಿನ ಹೆಸರನ್ನು ತಮ್ಮ ಮುಂದೋಳಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ವಿಮರ್ಶಾತ್ಮಕವಾಗಿ ಮೆಚ್ಚುಗೆ ಸ್ವೀಕರಿಸಿರುವ '12th ಫೇಲ್' ಚಿತ್ರದಲ್ಲಿ ಅಮೋಘ ಅಭಿನಯದಿಂದ ಜನಪ್ರಿಯತೆ ಹೆಚ್ಚಿಸಿಕೊಂಡಿರುವ ವಿಕ್ರಾಂತ್ ಮಾಸ್ಸೆ, ಮಗನ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿರುವ ಚಿತ್ರವನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಸ್ಟೋರಿ ಸೆಕ್ಷನ್ನಲ್ಲಿ ಶೇರ್ ಮಾಡಿದ್ದಾರೆ.
ವಿಕ್ರಾಂತ್ ಮಾಸ್ಸೆ ಶೇರ್ ಮಾಡಿರುವ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿರುವ ಫೋಟೋದಲ್ಲಿ, ಕೈ ಮೇಲೆ "ವರ್‌ದಾನ್ 7-2-2024" ಎಂದು ಬರೆದಿರುವುದನ್ನು ಕಾಣಬಹುದು. ಈ ಫೋಟೋಗೆ 'ಅಡಿಕ್ಷನ್ ಅಥವಾ ಆಡಿಶನ್? ನನಗೆ ಎರಡೂ ಇಷ್ಟ' ಎಂದು ಬರೆದುಕೊಂಡಿದ್ದಾರೆ.