ಬಾಲಿವುಡ್ನ ಪ್ರತಿಭಾನ್ವಿತ ನಟ ವಿಕ್ರಾಂತ್ ಮಸ್ಸೆ ನಟನಾ ಲೋಕದಿಂದ ವಿರಾಮ ತೆಗೆದುಕೊಳ್ಳುವ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಸೂಪರ್ಸ್ಟಾರ್ನ ಈ ಅನೌನ್ಸ್ಮೆಂಟ್ ಅಪಾರ ಸಂಖ್ಯೆಯ ಅಭಿಮಾನಿಗಳು, ಸಿನಿಪ್ರಿಯರು ಮತ್ತು ಚಿತ್ರರಂಗದವರಿಗೆ ಆಘಾತ ತರಿಸಿದೆ. ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿರುವ '12th ಫೇಲ್' ಸಿನಿಮಾ ನಟ, ಇಂದು ಬೆಳಗ್ಗೆ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ನಿರ್ಧಾರ ಹಂಚಿಕೊಂಡಿದ್ದಾರೆ. ವೃತ್ತಿಜೀವನದುದ್ದಕ್ಕೂ ಬೆಂಬಲಿಸಿದ ಸರ್ವರಿಗೂ ಕೃತಜ್ಞತೆ ಅರ್ಪಿಸಿದ್ದಾರೆ.
ನಟ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ, "ಕಳೆದ ಕೆಲ ವರ್ಷಗಳು ಅದ್ಭುತ. ಅಪಾರ ಬೆಂಬಲಕ್ಕಾಗಿ ನಾನು ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಮುಂದುವರಿಯುತ್ತಿದ್ದಂತೆ, ಮರುಮಾಪನ ಮಾಡಿಕೊಳ್ಳಲು ಮತ್ತು ಮನೆಗೆ ಮರಳಲು ಸಮಯ ಬಂದಿದೆ ಎಂಬುದನ್ನು ನಾನು ಅರಿತುಕೊಂಡೆ. ಒಬ್ಬ ಪತಿ, ತಂದೆ, ಮಗ ಮತ್ತು ನಟನಾಗಿ...''ಎಂದು ಬರೆದಿದ್ದಾರೆ.
ಚಿತ್ರರಂಗಕ್ಕೆ ನಿವೃತ್ತಿ ಘೋಷಿಸಿದ್ದರೂ ಕೂಡಾ, ವಿಕ್ರಾಂತ್ ಮಸ್ಸೆ 2025ರಲ್ಲಿ ಬಿಡುಗಡೆಯಾಗಲಿರುವ 3 ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವು ಬಿಗ್ ಸ್ಕ್ರೀನ್ನಲ್ಲಿ ಅವರ ಅಂತಿಮ ಪ್ರದರ್ಶನವಾಗಿರಲಿದೆ. ಈ ಬಹುಮುಖ ಪ್ರತಿಭೆಯ ಸುಪ್ರಸಿದ್ಧ ಸಿನಿ ವೃತ್ತಿಜೀವನ, ಆಸ್ತಿ ಮೌಲ್ಯ ಮತ್ತು ಇತರೆ ವೈಯಕ್ತಿಕ ವಿವರಗಳು ಇಲ್ಲಿವೆ.
ಕಿರುತೆರೆಯಿಂದ ಹಿರಿತೆರೆಗೆ ನಟನ ಪ್ರಯಾಣ: ವಿಕ್ರಾಂತ್ ಮಸ್ಸೆ ಅವರ ನಟನಾ ವೃತ್ತಿಜೀವನವು ಕಿರುತೆರೆಯಿಂದ ಪ್ರಾರಂಭವಾಯಿತು. 'ಬಾಲಿಕಾ ವಧು' ಮತ್ತು 'ಕುಬೂಲ್ ಹೈ' ಎಂಬಂತಹ ಜನಪ್ರಿಯ ಧಾರವಾಹಿಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿ ಹೆಸರುವಾಸಿಯಾದರು. ಆದಾಗ್ಯೂ, ಅವರ ಆಕಾಂಕ್ಷೆಗಳು, ಸಾಧಿಸಬೇಕೆನ್ನುವ ಛಲ ಬಾಲಿವುಡ್ ಪ್ರವೇಶಿಸಲು ನೆರವಾಯಿತು. ನಂತರ, ಬಹುಮುಖ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡರು. ತಮ್ಮ ಎಲ್ಲಾ ಪಾತ್ರಗಳಿಗೂ ಜೀವ ತುಂಬುವಲ್ಲಿ ಯಶ ಕಂಡರು.
ಸಿನಿಮಾ ಸಾಧನೆ:ಮಸ್ಸೆ ವೃತ್ತಿಜೀವನವು 'ಲೂಟೆರಾ' (2013) ಚಿತ್ರದಲ್ಲಿನ ಅಮೋಘ ಅಭಿನಯದಿಂದ ಪ್ರಾರಂಭವಾಯಿತು. ರಣ್ವೀರ್ ಸಿಂಗ್ ಮತ್ತು ಸೋನಾಕ್ಷಿ ಸಿನ್ಹಾ ಅವರೊಂದಿಗೆ ಕಾಣಿಸಿಕೊಂಡಿದ್ದರು. 'ಛಪಾಕ್' (2020) ನಲ್ಲಿನ ಸಾಮಾಜಿಕ ಕಾರ್ಯಕರ್ತನ ಪಾತ್ರ ಮತ್ತು 'ಹಸೀನ್ ದಿಲ್ರುಬಾ' (2021) ನಲ್ಲಿನ ಅವರ ನಟನೆ ಪ್ರೇಕ್ಷಕರ ಗಮನ ಸೆಳೆದಿದೆ. 2023ರಲ್ಲಿ ಬಂದ '12th ಫೇಲ್'ನಲ್ಲಿ ಅವರ ಪಾತ್ರ, ಅಮೋಘ ಅಭಿನಯ ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ತಂದುಕೊಟ್ಟಿತು. ಇದು ಅವರ ವೃತ್ತಿಜೀವನಲ್ಲೇ ಪ್ರಮುಖ ಸಿನಿಮಾವಾಗಿದೆ. ಸಿನಿಪ್ರಿಯರು, ವಿಮರ್ಶಕರು ಮಾತ್ರವಲ್ಲದೇ ಚಿತ್ರರಂಗದ ಗಣ್ಯಾತಿಗಣ್ಯರು ಸಹ ನಟನ ಪ್ರತಿಭೆಯನ್ನು ಪ್ರಶಂಸಿಸಿದ್ದರು.
'ದಿಲ್ ಧಡಕ್ನೆ ದೋ' (2015), 'ಲಿಪ್‌ಸ್ಟಿಕ್ ಅಂಡರ್ ಮೈ ಬುರ್ಖಾ' (2016), 'ಗಿನ್ನಿ ವೆಡ್ಸ್ ಸನ್ನಿ' (2020) ಮತ್ತು 'ಕಾರ್ಗೋ' (2020) ನಟನ ಇತರೆ ಮಹತ್ವದ ಸಿನಿಮಾಗಳು. ವಿವಿಧ ಜಾನರ್ಗಳಲ್ಲಿ ನಟಿಸುವ ಮೂಲಕ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡರು.
ರಿಷಬ್ ಶೆಟ್ಟಿ ಟ್ವೀಟ್: '12th ಫೇಲ್' ಸಿನಿಮಾ ಬಿಡುಗಡೆ ಆದ ಸಂದರ್ಭದಲ್ಲಿ ಇತರೆ ಅನೇಕ ಸೂಪರ್ಸ್ಟಾರ್ಗಳಂತೆ ಕನ್ನಡದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕೂಡಾ ತಮ್ಮ ಅಪಾರ ಮೆಚ್ಚುಗೆ ಸೂಚಿಸಿದ್ದರು. 2023ರ ನವೆಂಬರ್ ಆರಂಭದಲ್ಲಿ ಟ್ವೀಟ್ ಮಾಡಿದ್ದ ಅವರು, ''12th ಫೇಲ್ ಒಂದು ಮುಖ್ಯ ಪಾಠ ಎತ್ತಿ ಹಿಡಿದಿದೆ. ನಾವೆಷ್ಟೇ ಆಳಕ್ಕೆ ಕುಸಿದರೂ, ಬದುಕನ್ನು ಪುನರಾರಂಭಿಸುವುದು ನಮಗೆ ವಿಭಿನ್ನ ಅನುಭವ ಮತ್ತು ಆಯಾಮ ನೀಡುತ್ತದೆ. ಕಥೆ ರವಾನಿಸಿದ ಶೈಲಿಯಿಂದ ನಾನು ನಿಜಕ್ಕೂ ಸ್ಫೂರ್ತಿ ಪಡೆದಿದ್ದೇನೆ'' ಎಂದು ತಿಳಿಸಿದ್ದರು.