ಬುದ್ಧಿವಂತ ಖ್ಯಾತಿಯ ಉಪೇಂದ್ರ ಸಾರಥ್ಯದ ಡಿಸ್ಟೋಪಿಯನ್ ಸೈನ್ಸ್ ಫಿಕ್ಷನ್ ಥ್ರಿಲ್ಲರ್ 'ಯುಐ' ಬಹುತೇಕ ಮೆಚ್ಚುಗೆಯನ್ನೇ ಸ್ವೀಕರಿಸಿದ್ದು, ಭಾರತೀಯ ಗಲ್ಲಾಪೆಟ್ಟಿಗೆಯಲ್ಲೂ ಧೂಳೆಬ್ಬಿಸಿದೆ. ಸಿನಿಮಾ ತನ್ನ ಮೊದಲ ದಿನ 6.75 ಕೋಟಿ ರೂಪಾಯಿ ಸಂಗ್ರಹಿಸಿಸೋ ಮೂಲಕ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿದೆ. ಆರಂಭದಲ್ಲಿ ಬಂದ ಚಿತ್ರದ ವಿಶಿಷ್ಟ ಸಾಲುಗಳು ಪ್ರೇಕ್ಷಕರ ಕುತೂಹಲವನ್ನು ಕೆರಳಿಸಿ, ಸೋಷಿಯಲ್ ಮೀಡಿಯಾದಲ್ಲಿ ಆಸಕ್ತಿ ಹುಟ್ಟುಹಾಕಿತಿ. ಈ ಮೂಲಕ ಚಿತ್ರ ತನ್ನ ಆಕರ್ಷಣೆಯನ್ನು ಹೆಚ್ಚಿಸಿಕೊಂಡಿದೆ.
ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, 'ಯುಐ' ರಾಜ್ಯದಲ್ಲಿ 6 ಕೋಟಿ ರೂಪಾಯಿ ಸಂಗ್ರಹಿಸಿದೆ. ತೆಲುಗು ಬಾಕ್ಸ್ ಆಫೀಸ್‌ನಿಂದ 70 ಲಕ್ಷ ರೂ., ತಮಿಳುನಾಡಿನಿಂದ 4 ಲಕ್ಷ ರೂ. ಮತ್ತು ಹಿಂದಿ ಪ್ರದೇಶಗಳಿಂದ 1 ಲಕ್ಷ ರೂಪಾಯಿಯ ವ್ಯವಹಾರ ನಡೆಸಿದೆ. ಸೋಷಿಯಲ್ ಮೀಡಿಯಾದಲ್ಲೀಗ ಉಪ್ಪಿ ಹವಾ ಜೋರಾಗಿದ್ದು, ವಾರಾಂತ್ಯ ಕಲೆಕ್ಷನ್ನ ಅಂಕಿ - ಅಂಶಗಳು ಇನ್ನಷ್ಟು ಏರಿಕೆ ಆಗುವ ಸಾಧ್ಯತೆಗಳಿವೆ. ಸಿನಿಮಾದ ಕನ್ನಡ ಆವೃತ್ತಿಯು ಉತ್ತಮ ಆಕ್ಯುಪೆನ್ಸಿ ರೇಟ್ ಹೊಂದಿತ್ತು. ಡಿಸೆಂಬರ್ 20, ಶುಕ್ರವಾರದಂದು ಒಟ್ಟಾರೆ ಆಕ್ಯುಪೆನ್ನಿ 72.44% ರಷ್ಟಿತ್ತು. ತೆಲುಗು ಆವೃತ್ತಿ ಒಟ್ಟಾರೆ ಶೇ.38.32ರಷ್ಟು ಆಕ್ಯುಪೆನ್ಸಿ ಹೊಂದಿತ್ತು.
ಮುಖ್ಯಭೂಮಿಕೆಯಲ್ಲಿ ನಟಿಸಿರುವ ಉಪೇಂದ್ರ ಅವರೇ ಸಿನಿಮಾದ ಕಥೆ ಬರೆದು ನಿರ್ದೇಶಿಸಿದ್ದಾರೆ. ರೀಷ್ಮಾ ನಾಣಯ್ಯ, ಮುರಳಿ ಶರ್ಮಾ, ಸನ್ನಿ ಲಿಯೋನ್, ಜಿಶು ಸೇನ್ಗುಪ್ತಾ, ನಿಧಿ ಸುಬ್ಬಯ್ಯ, ಸಾಧು ಕೋಕಿಲ, ಮುರಳಿ ಕೃಷ್ಣ ಮತ್ತು ಇಂದ್ರಜಿತ್ ಲಂಕೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.