ಟಾಲಿವುಡ್ ಸೂಪರ್ ಸ್ಟಾರ್ ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೇಲಾ ಥಾಯ್ಲೆಂಡ್ ಪ್ರವಾಸದ ಫೋಟೋವನ್ನು ಸೋಷಿಯಲ್ ಮಿಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇಲ್ಲಿ ನೆಟ್ಟಿಗರ ಗಮನ ಸೆಳೆದಿದ್ದು ಮಗಳು ಕ್ಲಿನ್ ಕಾರಾ. ಹೌದು, ಇಂದು ಬೆಳಗ್ಗೆ ರಾಮ್ ಚರಣ್ ಮತ್ತು ತಮ್ಮ ಪುಟ್ಟ ಕಂದಮ್ಮನನ್ನು ಒಳಗೊಂಡ ಸುಂದರ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಉಪಾಸನಾ ಅಭಿಮಾನಿಗಳ ಸಂತಸಕ್ಕೆ ಕಾರಣರಾಗಿದ್ದಾರೆ.
ರಾಮ್ ಚರಣ್-ಉಪಾಸನಾ ದಂಪತಿ ಮಗಳನ್ನು ಎಲ್ಲಿಗೇ ಕರೆದೊಯ್ದರೂ ಕೂಡ ಮುಖವನ್ನು ತೋರಿಸುತ್ತಿರಲಿಲ್ಲ. ಸಂಪೂರ್ಣ ಕವರ್ ಮಾಡಿ, ಕ್ಯಾಮರಾಗಳಿಗೆ ಬೀಳದಂತೆ ಜಾಗ್ರತೆ ವಹಿಸುತ್ತಿದ್ದರು. ಆದಾಗ್ಯೂ, ಇತ್ತೀಚೆಗೆ ನಟನ ಜನ್ಮದಿನದ ಸಲುವಾಗಿ ತಿರುಪತಿಗೆ ಭೇಟಿ ಕೊಟ್ಟಾಗ ಅಕಸ್ಮಾತ್ ಆಗಿ ಮಗಳ ಮುಖ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದೀಗ ಸ್ವತಃ ಉದ್ಯಮಿ ಉಪಾಸನಾ ಅವರೇ ಮಗಳ ಫೋಟೋ ಹಂಚಿಕೊಂಡಿದ್ದಾರೆ. ಸಂಪೂರ್ಣ ಮುಖ ಕಂಡಿಲ್ಲವಾದರೂ, ಎಂದಿನಂತೆ ಮುಖ ಮುಚ್ಚುವ ಕೆಲಸ ಮಾಡಿಲ್ಲ.
ಮೊದಲ ಬಾರಿಗೆ ಮಗಳು ಕ್ಲಿನ್ ಕಾರಾ ಮುಖವನ್ನು ರಿವೀಲ್ ಮಾಡಿದ ಉಪಾಸನಾ, "ಅದ್ಭುತ ಅನುಭವಕ್ಕಾಗಿ ಧನ್ಯವಾದಗಳು ಮಿಸ್ಟರ್ ಸಿ/ನಾನಾ. ಆನೆ ರಕ್ಷಣಾ ಶಿಬಿರದಲ್ಲಿ ಬಹಳ ಕಲಿತುಕೊಂಡೆವು. ಬೆಸ್ಟ್ ಡ್ಯಾಡ್" ಎಂದು ಬರೆದುಕೊಂಡಿದ್ದಾರೆ. ಫೋಟೋದಲ್ಲಿ, ರಾಮ್ ಚರಣ್ ನೀರಿನ ಪೈಪ್ ಹಿಡಿದು ಆನೆಮರಿ ಮೇಲೆ ನೀರು ಚಿಮುಕಿಸುತ್ತಿರುವುದನ್ನು ಕಾಣಬಹುದು. ಮರಿ ಆನೆ ಪಕ್ಕದಲ್ಲೇ ನಿಂತ ಉಪಾಸನಾ ಮಗಳನ್ನು ತಮ್ಮ ತೋಳುಗಳಲ್ಲಿ ಹಿಡಿದುಕೊಂಡಿದ್ದಾರೆ. ಉಪಾಸನಾ ಮರಿ ಆನೆಯನ್ನು ಮುದ್ದಿಸುವ ಮನಸ್ಸಲ್ಲಿ ನೋಡುತ್ತಿರುವಂತಿದೆ. ಪವರ್ಫುಲ್ ಫ್ಯಾಮಿಲಿ ಫೋಟೋ ಕಂಡ ಅಭಿಮಾನಿಗಳು ಪ್ರೀತಿಯ ಧಾರೆಯೆರೆದಿದ್ದಾರೆ.