2024 ಪೂರ್ಣಗೊಳ್ಳಲು ಇನ್ನೊಂದು ತಿಂಗಳಷ್ಟೇ ಬಾಕಿ. ಈ ಡಿಸೆಂಬರ್‌ನಲ್ಲಿ ಬಹು ನಿರೀಕ್ಷಿತ ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ. ಸಿನಿಸುಗ್ಗಿ ವಾತಾವರಣ ನಿರ್ಮಾಣ ಆಗಲಿದೆ ಎಂದೇ ಹೇಳಬಹುದು. ಕನ್ನಡ ಚಿತ್ರರಂಗದ ಯುಐ, ಮ್ಯಾಕ್ಸ್ ಮತ್ತು ಪುಷ್ಪ ಸಿಕ್ವೆಲ್ ಸೇರಿದಂತೆ ಹಲವು ಬಿಗ್ ಪ್ರಾಜೆಕ್ಟ್ಗಳು ಚಿತ್ರಮಂದಿಗಳಲ್ಲಿ ಧೂಳೆಬ್ಬಿಸಲು ಸಜ್ಜಾಗಿದೆ. ನಿಮ್ಮ ಮೆಚ್ಚಿನ ನಟರ ಸಿನಿಮಾಗಳನ್ನು ಆನಂದಿಸಲು ನೀವು ರೆಡಿನಾ?..
ಯು ಐ (ಡಿಸೆಂಬರ್ 20): ತನ್ನ ವಿಭಿನ್ನ ಶೀರ್ಷಿಕೆಯಿಂದಲೇ ಸಾಕಷ್ಟು ಸದ್ದು ಮಾಡಿರುವ ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಸಿನಿಮಾ ''ಯು ಐ''. ಬುದ್ಧಿವಂತ ಖ್ಯಾತಿಯ ರಿಯಲ್ ಸ್ಟಾರ್ ಉಪೇಂದ್ರ ಅವರ ಸಿನಿಮಾ ಅಂದ್ಮೇಲೆ ರೆಗ್ಯುಲರ್ ಸಿನಿಮಾವನ್ನು ನಿರೀಕ್ಷಿಸೋಕೆ ಸಾಧ್ಯವೇ?. ಅದರಲ್ಲೂ ಬಹಳ ವರ್ಷಗಳ ಗ್ಯಾಪ್ ನಂತರ ಉಪ್ಪಿ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಹಿನ್ನೆಲೆ ಸಹಜವಾಗೇ ನಿರೀಕ್ಷೆ, ಕುತೂಹಲಗಳು ಹೆಚ್ಚಾಗಿವೆ. ಈಗಾಗಲೇ ಬಿಡುಗಡೆ ಆಗಿರುವ ಡಿಫ್ರೆಂಟ್ ಪೋಸ್ಟರ್ಸ್, ಟ್ರೋಲ್ ಸಾಂಗ್ ಮತ್ತು ಟೀಸರ್ ಅಪಾರ ಸಂಖ್ಯೆಯ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶ ಕಂಡಿದೆ. ಜಿ.ಮನೋಹರನ, ಕೆ.ಪಿ ಶ್ರೀಕಾಂತ್ ನಿರ್ಮಾಣದ ಈ ಸಿನಿಮಾ ಕನ್ನಡ ಜೊತೆಗೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಡಿಸೆಂಬರ್ 20ರಂದು ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.
ಮ್ಯಾಕ್ಸ್ (ಡಿಸೆಂಬರ್ 25): ಅಭಿನಯ ಚಕ್ರವರ್ತಿ ಸುದೀಪ್ ಮುಖ್ಯಭೂಮಿಕೆಯ 'ವಿಕ್ರಾಂತ್ ರೋಣ' ಸಿನಿಮಾ ತೆರೆಗೆ ಬಂದಿದ್ದು 2022ರ ಜುಲೈನಲ್ಲಿ. ಎರಡೂವರೆ ವರ್ಷಗಳ ಗ್ಯಾಪ್ ಬಳಿಕ ಬಿಡುಗಡೆಯಾಗುತ್ತಿರುವ 'ಮ್ಯಾಕ್ಸ್' ಮೇಲೆ ಸಿನಿಪ್ರಿಯರು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಸುದೀಪ್ ಅವರು ಅರ್ಜುನ್ ಮಹಾಕ್ಷಯ್ ಅನ್ನೋ ಸೂಪರ್ ಕಾಪ್ ಪಾತ್ರ ನಿರ್ವಹಿಸಿದ್ದು, ಸಿನಿಮಾ ಡಿಸೆಂಬರ್ 25ಕ್ಕೆ ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಲಿದೆ.
ಉತ್ತಮ ಪ್ರದರ್ಶನ ಕಂಡ ಕನ್ನಡ ಸಿನಿಮಾಗಳು:ಇತ್ತೀಚೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ 'ಬಘೀರ' ಮತ್ತು ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಅಭಿನಯದ 'ಭೈರತಿ ರಣಗಲ್' ಉತ್ತಮ ಪ್ರದರ್ಶನ ಕಂಡಿವೆ.
'ಪುಷ್ಪ 2: ದಿ ರೂಲ್' (ಡಿಸೆಂಬರ್ 5): ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್, ಕನ್ನಡತಿ ರಶ್ಮಿಕಾ ಮಂದಣ್ಣ ಮತ್ತು ಬಹುಭಾಷಾ ನಟ ಫಹಾದ್ ಫಾಸಿಲ್ ನಟನೆಯ ಪುಷ್ಪ 2: ದಿ ರೂಲ್ ಡಿಸೆಂಬರ್ 5 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಗ್ರ್ಯಾಂಡ್ ರಿಲೀಸ್ ಆಗಲಿದೆ. ಸುಕುಮಾರ್ ನಿರ್ದೇಶನದ ಈ ಹೈ ಆ್ಯಕ್ಟೇನ್ ಆಕ್ಷನ್ ಥ್ರಿಲ್ಲರ್ ಪುಷ್ಪ: ದಿ ರೈಸ್ ಸಾಹಸದ ಮುಂದುವರಿದ ಭಾಗ. ಚಿತ್ರದ ಪ್ರಚಾರ ಭರದಿಂದ ಸಾಗಿದ್ದು, ವಿದೇಶಗಳಲ್ಲಿ ಅಡ್ವಾನ್ಸ್ ಟಿಕೇಟ್ಸ್ ದೊಡ್ಡ ಮಟ್ಟದಲ್ಲೇ ಸೇಲ್ ಆಗಿವೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ದೇಶದ ಪ್ರಮುಖ ನಗರಗಳಲ್ಲಿ ಪ್ರಮೋಶನ್ ನಡೆಸುತ್ತಿದ್ದು, ಫೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಂಡಿವೆ.
ಬೇಬಿ ಜಾನ್ (ಡಿಸೆಂಬರ್ 29):ಬಾಲಿವುಡ್ ಸೂಪರ್ ಸ್ಟಾರ್ ವರುಣ್ ಧವನ್ ಅಭಿನಯದ 'ಬೇಬಿ ಜಾನ್' ಸಿನಿಮಾದೊಂದಿಗೆ ವರ್ಷ ಪೂರ್ಣಗೊಳ್ಳಲಿದೆ. ಜವಾನ್ ನಿರ್ದೇಶಕ ಅಟ್ಲೀ ನಿರ್ಮಿಸಿರುವ ಆ್ಯಕ್ಷನ್ ಡ್ರಾಮಾ ಇದು. ಕಲೀಸ್ ನಿರ್ದೇಶಿಸಿರುವ ಈ ಚಿತ್ರ ವಿಜಯ್ ಅವರ ಹಿಟ್ ಚಿತ್ರ 'ತೇರಿ'ಯ ಹಿಂದಿ ರಿಮೇಕ್ ಆಗಿದ್ದು, ವಾಮಿಕಾ ಗಬ್ಬಿ ಮತ್ತು ಕೀರ್ತಿ ಸುರೇಶ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್‌ಗಳು ಮತ್ತು ಪೋಸ್ಟರ್‌ಗಳು ಸಿನಿಪ್ರಿಯರ ನಿರೀಕ್ಷೆಗಳನ್ನು ಹೆಚ್ಚಿಸಿವೆ. ಡಿಸೆಂಬರ್ 29ಕ್ಕೆ ಬಿಡುಗಡೆ ಆಗಲಿರುವ ಈ ಚಿತ್ರ 2024ಕ್ಕೆ ಭವ್ಯ ವಿದಾಯ ಹೇಳುವ ಭರವಸೆಯಿದೆ.
ಇದನ್ನೂ ಓದಿ:ಪೌರಾಣಿಕ ಚಿತ್ರಗಳೆಡೆ ಚಿತ್ರರಂಗದ ಗಮನ: ರಿಷಬ್ ಶೆಟ್ಟಿ 'ಜೈ ಹನುಮಾನ್' ಮೇಲಿದೆ ಬೆಟ್ಟದಷ್ಟು ನಿರೀಕ್ಷೆಗಳು
ಈ ಪ್ರಮುಖ ಚಲನಚಿತ್ರಗಳ ಜೊತೆಗೆ, ಡಿಸೆಂಬರ್‌ನಲ್ಲಿ ಬಿಡುಗಡೆ ಆಗಲಿರುವ ಇತರೆ ಬಹುನಿರೀಕ್ಷಿತ ಸಿನಿಮಾಗಳಿವು.
- ಝೀರೋ ಸೆ ರೀಸ್ಟಾರ್ಟ್ (ಹಿಂದಿ, ಡಿಸೆಂಬರ್ 13).
- ವಿದುತಲೈ ಭಾಗ 2 (ತಮಿಳು, ಡಿಸೆಂಬರ್ 20).
- ವನವಾಸ್ (ಹಿಂದಿ, ಡಿಸೆಂಬರ್ 20).
- ರಾಬಿನ್‌ಹುಡ್ (ತೆಲುಗು, ಡಿಸೆಂಬರ್ 20).
- ಮಾರ್ಕೊ (ಮಲಯಾಳಂ, ಡಿಸೆಂಬರ್ 20).
- ಬರೋಜ್ (ಮಲಯಾಳಂ, ಡಿಸೆಂಬರ್ 25).
- ಮುಫಾಸಾ: ದಿ ಲಯನ್ ಕಿಂಗ್ (ಡಿಸೆಂಬರ್ 20).
ಇದನ್ನೂ ಓದಿ:'ನಾನು.... ಜೊತೆ ಕಾಣಿಸಿಕೊಳ್ಳಲು ಇಷ್ಟಪಡುವುದಿಲ್ಲ': ಸಮಂತಾರೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ತಂದೆ ಹೀಗಂದಿದ್ದರು!