ಕರ್ನಾಟಕ

karnataka

ತಮ್ಮೂರಿನ ಗಣೇಶೋತ್ಸವದಲ್ಲಿ ರಕ್ಷಿತ್​​ ಶೆಟ್ಟಿ ಭಾಗಿ: ಖ್ಯಾತ ನಟನನ್ನು ನೋಡಲು ಮುಗಿಬಿದ್ದ ಜನ - Rakshit Shetty

By ETV Bharat Karnataka Team

Published : Sep 11, 2024, 4:15 PM IST

ಉಡುಪಿಯ ಕುಕ್ಕಿಕಟ್ಟೆ ನಿವಾಸಿಯಾಗಿರುವ ರಕ್ಷಿತ್ ಶೆಟ್ಟಿ ತಮ್ಮ ಮೂಲ ಗ್ರಾಮವಾಗಿರುವ ಅಲೆವೂರಿನ ಕಟ್ಟೆ ಗಣಪತಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಜನಪ್ರಿಯ ನಟ ಆಗಮಿಸಿರುವ ಸುದ್ದಿ ತಿಳಿದ ಅಭಿಮಾನಿಗಳು, ಜನಸಾಮಾನ್ಯರು ಇಲ್ಲಿಗೆ ಬಂದು ಸೇರಿದ್ದರು.

Rakshit Shetty participates in Ganeshotsava
ತನ್ನೂರಿನ ಗಣೇಶೋತ್ಸವದಲ್ಲಿ ರಕ್ಷಿತ್​​ ಶೆಟ್ಟಿ ಭಾಗಿ (ETV Bharat)

ಉಡುಪಿ: ಕನ್ನಡ ಚಿತ್ರರಂಗದ ಜನಪ್ರಿಯ ನಟ ರಕ್ಷಿತ್ ಶೆಟ್ಟಿ ಕುಕ್ಕಿಕಟ್ಟೆಯ ಸಾರ್ವಜನಿಕ ಗಣೇಶೋತ್ಸವದಲ್ಲಿ ಭಾಗಿಯಾಗಿದ್ದಾರೆ. ಉಡುಪಿಯ ಕುಕ್ಕಿಕಟ್ಟೆ ನಿವಾಸಿಯಾಗಿರುವ ರಕ್ಷಿತ್ ಶೆಟ್ಟಿ ತಮ್ಮ ಮೂಲ ಗ್ರಾಮವಾಗಿರುವ ಅಲೆವೂರಿನ ಕಟ್ಟೆ ಗಣಪತಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಪ್ರಾರ್ಥನೆ ಸಲ್ಲಿಸಿ ದೇವರ ಆಶೀರ್ವಾದ ಪಡೆದರು.

ಗಣೇಶೋತ್ಸವದಲ್ಲಿ ರಕ್ಷಿತ್​​ ಶೆಟ್ಟಿ ಭಾಗಿ (ETV Bharat)

ಚಂದನವನದ ಅತ್ಯಂತ ಜನಪ್ರಿಯ ನಟ ಆಗಮಿಸಿರುವ ಸುದ್ದಿ ತಿಳಿದ ಅಭಿಮಾನಿಗಳು, ಜನಸಾಮಾನ್ಯರು ಇಲ್ಲಿ ಬಂದು ಸೇರಿದರು. ತಮ್ಮಿಷ್ಟದ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ತನ್ನೂರಿನ ಜನರ ಜೊತೆ ಸೆಲ್ಫಿಗೆ ಪೋಸ್​​ ಕೊಟ್ಟು ಅವರ ಪ್ರೀತಿಗೆ ಪಾತ್ರರಾದರು. ಪೂಜೆ ನಡೆಸಿಕೊಟ್ಟ ಅರ್ಚಕರು, ನಟ - ನಿರ್ಮಾಪಕ -ನಿರ್ದೇಶಕ ರಕ್ಷಿತ್ ಶೆಟ್ಟಿ ಭವಿಷ್ಯಕ್ಕೆ ಶುಭ ಕೋರಿದರು.

ತವರೂರಿನ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ರಕ್ಷಿತ್ ಶೆಟ್ಟಿ ಅಲೆವೂರು ಭಾಗದಲ್ಲಿ ನಡೆಯುವ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುತ್ತಾರೆ. ಕೆಲ ತಿಂಗಳ ಹಿಂದೆ ತಮ್ಮ ಮೂಲ ಮನೆಯ ದೈವದ ಆರಾಧನೆಯಲ್ಲೂ ಭಾಗವಹಿಸಿದ್ದರು. ಕಟ್ಟೆ ಗಣಪತಿ ಸನ್ನಿಧಾನ ಅಲೆವೂರು‌ ಭಾಗದ ಪ್ರಸಿದ್ಧ ತಾಣವಾಗಿದ್ದು, ಕಳೆದ ಐದು ದಿನಗಳಿಂದ ಸಾರ್ವಜನಿಕ ಗಣೇಶೋತ್ಸವ ನಡೆಯುತ್ತಿದೆ. ಸ್ಥಳೀಯರು ಗಣೇಶೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆಯುತ್ತಾರೆ.

ಇದನ್ನೂ ಓದಿ:ಕೇರಳದ ಹೇಮಾ ಸಮಿತಿಯಂತೆ ಕನ್ನಡದಲ್ಲೂ ಕಮಿಟಿ ರಚನೆಗೆ ಮನವಿ: ನಟ ರಕ್ಷಿತ್​​ ಶೆಟ್ಟಿಗೆ ವಿಷಯ ಗೊತ್ತಿಲ್ವೇ? - Rakshit Shetty

ಇನ್ನು ರಕ್ಷಿತ್​​ ಶೆಟ್ಟಿ ಸಿನಿಮಾ ವಿಚಾರ ಗಮನಿಸುವುದಾದರೆ, 'ಇಬ್ಬನಿ ತಬ್ಬಿದ ಇಳೆಯಲಿ' ಇತ್ತೀಚೆಗಷ್ಟೇ ತೆರೆಕಂಡು ಬಹುತೇಕ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಹಾಡುಗಳಿಂದಲೇ ಚಂದನವನದಲ್ಲಿ ಗಮನ ಸೆಳೆದಿದ್ದ ಚಿತ್ರ ಸೆಪ್ಟೆಂಬರ್​​​ 5ರಂದು ಬಿಡುಗಡೆ ಆಗಿತ್ತು. ವಿಹಾನ್, ಅಂಕಿತಾ ಅಮರ್ ಮತ್ತು ಮಯೂರಿ ನಟರಾಜ್ ಅಭಿನಯದ ಈ ಚಿತ್ರವನ್ನು ಪರಂವಃ ಸ್ಟುಡಿಯೋಸ್ ಲಾಂಛನದಲ್ಲಿ ಜಿ.ಎಸ್ ಗುಪ್ತಾ ಹಾಗೂ ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನದ ಈ ಚಿತ್ರಕ್ಕೆ ಗಗನ್ ಬಡೇರಿಯಾ ಸಂಗೀತ ನೀಡಿದ್ದು, ಶ್ರೀವತ್ಸನ್ ಸೆಲ್ವರಾಜನ್ ಅವರ ಕ್ಯಾಮರಾ ಕೈಚಳಕವಿದೆ. ರಕ್ಷಿತ್ ಕಾಪು ಸಂಕಲನ ನಿರ್ವಹಿಸಿದ್ದಾರೆ.

ಇದನ್ನೂ ಓದಿ:ಮಲೈಕಾ ಅರೋರಾ ತಂದೆ ಆತ್ಮಹತ್ಯೆ: ಪುಣೆಯಿಂದ ಮನೆ ತಲುಪಿದ ನಟಿ, ​ಅರ್ಜುನ್​ ಕಪೂರ್​ ಸಾಥ್ - Malaika And Arjun

ಇನ್ನೂ ಇತ್ತೀಚೆಗಷ್ಟೇ 'ಫೈರ್' ಸಂಘ ಸ್ಯಾಂಡಲ್​ವುಡ್​ನಲ್ಲಿ ನಟಿಯರ ಪರಿಸ್ಥಿತಿ ಬಗ್ಗೆ ಅರಿಯಲು ಕಮಿಟಿ ಒಂದನ್ನು ರಚಿಸಬೇಕು ಎಂಬ ಮನವಿಯನ್ನು ಸಿಎಂ ಸಿದ್ದರಾಮಯ್ಯರಿಗೆ ಸಲ್ಲಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ್ದ ನಟ ರಕ್ಷಿತ್​ ಶೆಟ್ಟಿ, ''ಕಮಿಟಿ ರಚನೆ ಒಂದೊಳ್ಳೆ ವಿಚಾರ. ನಾವೂ ಕೂಡಾ ಆ ಮನವಿ ಪತ್ರಕ್ಕೆ ಸಹಿ ಹಾಕುತ್ತೇವೆ. ಜೊತೆಗೆ ಅದಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡುತ್ತೇವೆ'' ಎಂದು ಹೇಳಿದ್ದರು.

ABOUT THE AUTHOR

...view details