ಬೆಳಗಾವಿ: ರಾಜ್ಯ, ರಾಷ್ಟ್ರ, ವಿದೇಶದಲ್ಲಿ ಕೆಲವು ವಿಶೇಷ ಘಟನಾವಳಿಗಳು ನಡೆದರೆ, ಅದರಲ್ಲಿ ಬೆಳಗಾವಿಯ ಹೆಜ್ಜೆ ಗುರುತುಗಳು ಇದ್ದೆ ಇರುತ್ತವೆ. ಅವು ಸಿಹಿ - ಕಹಿಗಳ ನೆನಪುಗಳ ಹೂರಣವು ಆಗಿರುತ್ತವೆ. ನಿನ್ನೆಯಷ್ಟೇ ನಡೆದ ಅಮೆರಿಕರದ ಚುನಾವಣೆಗೂ ಬೆಳಗಾವಿ ನಂಟಿದೆ. ಈ ನಂಟಿನ ಗಂಟನ್ನು ಈಟಿವಿ ಭಾರತದ ವಿಶೇಷ ವರದಿ ಬಿಚ್ಚಿಡುತ್ತಿದೆ.
ವಿಶ್ವವೇ ಕುತೂಹಲದಿಂದ ಕಾಯುತ್ತಿದ್ದ ಅಮೆರಿಕ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷದ ಭರ್ಜರಿ ಗೆಲುವು ಸಾಧಿಸಿದೆ. ಅಮೆರಿಕದ ಸಂಸತ್ತಿನ ಪ್ರತಿನಿಧಿಗಳ ಚುನಾವಣೆಯಲ್ಲಿ ಮಿಷಿಗನ್ ರಾಜ್ಯದಿಂದ ಸ್ಪರ್ಧಿಸಿದ್ದ ಬೆಳಗಾವಿ ಮಣ್ಣಿನ ಮಗ ಶ್ರೀನಿವಾಸ್ ಥಾಣೇಧಾರ್ ಕೂಡ ಗೆದ್ದಿದ್ದಾರೆ. ಈ ಮೂಲಕ ಅಮೆರಿಕ ರಾಜಕೀಯದಲ್ಲಿ ಕನ್ನಡ ನಾಡಿನ ಛಾಪು ಮೂಡಿಸಿದ್ದಾರೆ. ಸಾಹಿತಿ, ವಿಜ್ಞಾನಿ ಹಾಗೂ ಅಮೆರಿಕದ ಪ್ರಖ್ಯಾತ ಉದ್ಯಮಿಯಾಗಿರುವ ಶ್ರೀನಿವಾಸ್ ಥಾಣೇಧಾರ್ ಬೆಳಗಾವಿ ಮೂಲದವರು ಎಂಬುವುದು ಹೆಮ್ಮೆಯ ಸಂಗತಿ.
ಶ್ರೀನಿವಾಸ್ ಥಾಣೇಧಾರ್ ಹಿನ್ನೆಲೆ: ಚಿಕ್ಕೋಡಿಯಲ್ಲಿ 1955ರ ಫೆ.22ರಂದು ಶ್ರೀನಿವಾಸ್ ಜನಿಸಿದ್ದಾರೆ. ಅವರ ತಂದೆ ಬೆಳಗಾವಿ ಕೋರ್ಟ್ನಲ್ಲಿ ನೌಕರಿ ಮಾಡುತ್ತಿದ್ದರು. ಹಾಗಾಗಿ, ಬೆಳಗಾವಿ ನಗರದ ಶಹಾಪುರದ ಮೀರಾಪುರ ಗಲ್ಲಿಯಲ್ಲಿ ವಾಸವಿದ್ದ ಶ್ರೀನಿವಾಸ್ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನ ಇಲ್ಲಿನ ಚಿಂತಾಮಣರಾವ್ ಸರ್ಕಾರಿ ಪದವಿ ಪೂರ್ವ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ. ಬಳಿಕ ಪಿಯುಸಿ ಬೆಳಗಾವಿ ಕಾಲೇಜೊಂದರಲ್ಲಿ ಮುಗಿಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿಎಸ್ಸಿ ಪದವಿ ಪಡೆದಿದ್ದಾರೆ. 1977ರಲ್ಲಿ ಬಾಂಬೆ ವಿಶ್ವವಿದ್ಯಾಲಯದಿಂದ ರಸಾಯನ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಶ್ರೀನಿವಾಸ್, 1979ರಲ್ಲಿ ಅಮೆರಿಕಕ್ಕೆ ತೆರಳಿದ್ದರು. 1982ರಲ್ಲಿ ಪಾಲಿಮರ್ ಕೆಮಿಸ್ಟ್ರಿ ವಿಷಯದಲ್ಲಿ ಅಲ್ಲೇ ಪಿಹೆಚ್‌ಡಿ ಪದವಿ ಗಳಿಸಿದ್ದಾರೆ. 1982ರಿಂದ 1984ರವೆಗೆ ಮಿಷಿಗನ್ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸಿದ್ದರು. 1984ರಿಂದ 1990ರವರೆಗೆ ಪಾಲಿಮರ್ ಸಿಂಥೆಸಿಸ್ ಕೆಮಿಸ್ಟ್ ಹಾಗೂ ಪ್ರಾಜೆಕ್ಟ್ ಲೀಡರ್ ಆಗಿ ಪೆಟ್ರೊಲೈಟ್ ಕಾರ್ಪೊರೇಷನ್‌ನಲ್ಲಿ ಕಾರ್ಯನಿರ್ವಹಿಸಿದ್ದ ಅವರು, ಬಳಿಕ ಸ್ವಂತ ಉದ್ಯಮ ಆರಂಭಿಸಿದ್ದರು.
ಶೇ.68.6ರಷ್ಟು ಮತಗಳನ್ನು ಪಡೆದು ಗೆದ್ದಿರುವ ಶ್ರೀನಿವಾಸ್ ಥಾಣೇಧಾರ್ ಮಿಚಿಗನ್ ರಾಜ್ಯದಿಂದ ಎರಡನೇ ಬಾರಿ ಅಮೆರಿಕ ಸಂಸತ್ ಪ್ರವೇಶಿಸಿದ ಹಿನ್ನೆಲೆಯಲ್ಲಿ ಅವರು ಕಲಿತ ಚಿಂತಾಮಣರಾವ್ ಶಾಲೆಯ ಈಗಿನ ಶಿಕ್ಷಕರು, ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಈಟಿವಿ ಭಾರತ ಜೊತೆಗೆ ಮಾತನಾಡಿದ ಇಂಗ್ಲಿಷ್ ಶಿಕ್ಷಕ ಅಷ್ಟಗಿ, ಸರ್ಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿ ಇಂದು ಅಮೆರಿಕ ಚುನಾವಣೆಯಲ್ಲಿ ಗೆದ್ದಿದ್ದು ನಮಗೆ ಹೆಮ್ಮೆ ಮತ್ತು ಖುಷಿಯ ವಿಚಾರ. ಬೆಳಗಾವಿಗೆ ಬಂದಾಗ ಹಿಂದೆ ಒಮ್ಮೆ ಶಾಲೆಗೆ ಅವರು ಭೇಟಿ ನೀಡಿದ್ದರು. ಇನ್ನು ಚಿಂತಾಮಣರಾವ್ ಶಾಲೆಯಲ್ಲಿ ಕಲಿತ ಅನೇಕರು ಶಾಸಕ, ವಿಜ್ಞಾನಿ ಸೇರಿ ಉನ್ನತ ಹುದ್ದೆಯಲ್ಲಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಮೀರಾಪುರ ಗಲ್ಲಿಯಲ್ಲಿ ಶ್ರೀನಿವಾಸ್ ಅವರ ಸ್ವಂತ ಮನೆಯಿತ್ತು. ಅವರು ಮುಂಬೈಗೆ ನೆಲೆಸಿದ ಬಳಿಕ ಈ ಮನೆಯನ್ನು ಮಾರಾಟ ಮಾಡಿದ್ದು, ಸದ್ಯ ಈ ಜಾಗದಲ್ಲಿ ಅಪಾರ್ಟಮೆಂಟ್ ತಲೆ ಎತ್ತಿದೆ. ಶ್ರೀನಿವಾಸ್ ಶಾಲೆಯಲ್ಲಿ ತುಂಬಾ ಜಾಣನಾಗಿದ್ದ, ಅವರದ್ದು ಮಧ್ಯಮ ವರ್ಗದ ಕುಟುಂಬ ಆಗಿತ್ತು. ನಾವು ಜೊತೆಗೆ ಆಟ ಆಡಿದ್ದೆವು. ಇಷ್ಟು ದೊಡ್ಡ ಹುದ್ದೆ ಏರುತ್ತಾರೆಂದು ಅಂದುಕೊಂಡಿರಲಿಲ್ಲ. ಆದರೆ, ಈಗ ದೊಡ್ಡ ಸಾಧನೆ ಮಾಡಿದ್ದು ಕೇಳಿ ತುಂಬಾ ಸಂತೋಷ ಆಗಿದೆ ಎನ್ನುತ್ತಾರೆ ಶ್ರೀನಿವಾಸ್ ಅವರ ಜೊತೆ ಶಾಲೆಯಲ್ಲಿ ಸಿನಿಯರ್ ಆಗಿದ್ದ ಉಲ್ಲಾಸ್.
ಇದನ್ನೂ ಓದಿ: ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಚುನಾವಣೆಯಲ್ಲಿಇಬ್ಬರು ಕನ್ನಡಿಗರು ಸೇರಿ ಆರು ಭಾರತೀಯ ಅಮೆರಿಕನ್ರಿಗೆ ಗೆಲುವು