ವಯನಾಡ್, ಕೇರಳ: ವಯನಾಡ್ ಲೋಕಸಭೆ ಉಪ ಚುನಾವಣೆಗೆ 6 ದಿನ ಬಾಕಿ ಇದ್ದು, ರಾಜಕೀಯ ಪಕ್ಷಗಳು ಮತಕ್ಕಾಗಿ ಭರವಸೆಗಳ ಸುರಿಮಳೆ ಸುರಿಸುತ್ತಿದ್ದಾರೆ. ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ಅಭ್ಯರ್ಥಿ ಪ್ರಿಯಾಂಕಾ ವಾದ್ರಾ ಅವರ ಚಿತ್ರವಿರುವ ಆಹಾರ ಕಿಟ್‌ಗಳು ಗುರುವಾರ ಪತ್ತೆಯಾಗಿದ್ದು, ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ವಶಪಡಿಸಿಕೊಂಡಿದೆ.
ವಯನಾಡಿನ ತೊಲ್ಪೆಟ್ಟಿಯಲ್ಲಿ ಕಾಂಗ್ರೆಸ್ಗೆ ಸೇರಿದ ಆಹಾರ ಕಿಟ್‌ಗಳು ಸಿಕ್ಕಿವೆ. ಇಲ್ಲಿನ ಮನೆಯೊಂದರಲ್ಲಿ ಮತದಾರರಿಗೆ ಹಂಚಲು ಕಿಟ್‌ಗಳ ಸಿದ್ಧ ಮಾಡಲಾಗುತ್ತಿದೆ ಎಂಬ ಮಾಹಿತಿಯ ಮೇರೆಗೆ ಚುನಾವಣಾ ನಿಯಂತ್ರಣ ತಂಡ ದಾಳಿ ನಡೆಸಿದೆ. ತಪಾಸಣೆಯಲ್ಲಿ ಕಾಂಗ್ರೆಸ್ ಮುಖಂಡ ಶಶಿಕುಮಾರ್ ತೋಳ್ಪೆಟ್ಟಿ ಅವರ ಮನೆಯ ಪಕ್ಕದ ಕೊಠಡಿಯಲ್ಲಿ ಈ ಕಿಟ್‌ಗಳನ್ನು ಇಡಲಾಗಿತ್ತು.
ದಾಳಿಯಲ್ಲಿ ಸುಮಾರು 30 ಆಹಾರ ಕಿಟ್‌ಗಳು ಸಿಕ್ಕಿವೆ. ಅದರಲ್ಲಿ ಟೀ ಪುಡಿ, ಸಕ್ಕರೆ, ಅಕ್ಕಿ ಮತ್ತು ಇತರ ದಿನಸಿ ಪದಾರ್ಥಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಿಟ್ ಮೇಲೆ ಕರ್ನಾಟಕದ ಟಚ್: ಕಿಟ್‌ಗಳ ಮೇಲೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕರ್ನಾಟಕ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಹಲವರ ಚಿತ್ರಗಳಿವೆ. ಇವನ್ನು ಇತ್ತೀಚೆಗೆ ಭೂಕುಸಿತ ಉಂಟಾದ ಪ್ರದೇಶಗಳಾದ ಮೆಪ್ಪಾಡಿ, ಮುಂಡಕೈ ಮತ್ತು ಚೂರ್ಲಮಾಲ ಸಂತ್ರಸ್ತರಿಗೆ ವಿತರಿಸಲು ಯೋಜಿಸಲಾಗಿತ್ತು. ಕಿಟ್ ಮೇಲೆ ಭೂಕುಸಿತ ಸಂತ್ರಸ್ತರಿಗೆ ಎಂದು ಕೂಡ ಬರೆಯಲಾಗಿದೆ.
ಕಿಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡ ಬೆನ್ನಲ್ಲೇ, ರಾಜಕೀಯ ಕೆಸರೆರಚಾಟ ಜೋರಾಗಿದೆ. ಮತಕ್ಕಾಗಿ ಕಾಂಗ್ರೆಸ್ ಈ ಕಿಟ್‌ಗಳನ್ನು ವಿತರಿಸುತ್ತಿದೆ. ಆಮಿಷ ಒಡ್ಡುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಆದರೆ, ಇದನ್ನು ಕಾಂಗ್ರೆಸ್ ನಿರಾಕರಿಸಿದ್ದು, ಭೂಕುಸಿತದ ಸಂತ್ರಸ್ತರಿಗೆ ವಿತರಿಸಲು ಈ ಹಿಂದೆ ತಂದಿದ್ದ ಕಿಟ್‌ಗಳು ಎಂದು ಸಮರ್ಥಿಸಿಕೊಂಡಿದೆ.
ಉಪ ಚುನಾವಣೆ ನಡೆಯುತ್ತಿರುವ ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ನವೆಂಬರ್ 13 ರಂದು ಮತದಾನ ನಡೆಯಲಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಯುಡಿಎಫ್ ಮೈತ್ರಿ ಅಭ್ಯರ್ಥಿಯಾಗಿದ್ದು, ಅವರು ಸಿಪಿಐ ಅಭ್ಯರ್ಥಿ, ಹಿರಿಯ ನಾಯಕ ಸತ್ಯನ್ ಮೊಕೇರಿ ಮತ್ತು ಬಿಜೆಪಿ ಅಭ್ಯರ್ಥಿ ನವ್ಯಾ ಹರಿದಾಸ್ ವಿರುದ್ಧ ಸ್ಪರ್ಧಿಸಲಿದ್ದಾರೆ.
ಇದನ್ನೂ ಓದಿ: ವಯನಾಡ್ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ವಾದ್ರಾ ₹12 ಕೋಟಿ ಆಸ್ತಿಯ ಒಡತಿ