ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಶೀರ್ಷಿಕೆಗಳುಳ್ಳ ಸಿನಿಮಾಗಳು ಮೂಡಿ ಬರುತ್ತಿವೆ. ಈ ಸಾಲಿಗೆ 'ರವಿಕೆ ಪ್ರಸಂಗ' ಹೊಸ ಸೇರ್ಪಡೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಈ ಸಿನಿಮಾದ ಟೀಸರ್ ಮತ್ತು ಟ್ರೇಲರ್ ಇತ್ತೀಚೆಗೆ ಬಿಡುಗಡೆ ಆಗಿ ಮೆಚ್ಚುಗೆ ಪಡೆದಿತ್ತು. ಇದೀಗ ಸೆನ್ಸಾರ್ ಪರೀಕ್ಷೆಯಲ್ಲೂ ಪಾಸ್ ಆಗಿದೆ.
ರವಿಕೆ ಸುತ್ತ ಕಥೆ: ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಗೀತಾ ಭಾರತಿ ಭಟ್ ಮುಖ್ಯಭೂಮಿಕೆಯ 'ರವಿಕೆ ಪ್ರಸಂಗ'ವು ರವಿಕೆ ಅಂದರೆ ಬ್ಲೌಸ್ ಅನ್ನು ಪ್ರಮುಖವಾಗಿ ಇಟ್ಟುಕೊಂಡು ಕೌಟುಂಬಿಕ ಕಥಾ ಹಂದರ ಹೆಣೆಯಲಾಗಿದೆ. ಉತ್ತಮ ಸಂದೇಶವನ್ನು ಹಾಸ್ಯಭರಿತವಾಗಿ ಸಮಾಜಕ್ಕೆ ತಿಳಿಸುವ ಪ್ರಯತನವನ್ನು ನಿರ್ದೇಶಕರು ಮಾಡಿದ್ದಾರೆ.
ಈ ಚಿತ್ರದ ರವಿಕೆ ಸಾಂಗ್ ಅನ್ನು ಚೈತ್ರಾ ಹಾಗೂ ಚೇತನ್ ನಾಯಕ್ ಹಾಡಿದ್ದಾರೆ. ಮನಸಲಿ ಜೋರು ಕಲರವ ಹಾಡನ್ನು ಮಾನಸ ಹೊಳ್ಳ ಮತ್ತು ಹಸಿಮನಸಲಿ ಹಾಡನ್ನು ಜೋಗಿ ಸುನೀತಾ ಹಾಡಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಗೀತಾ ಭಾರತಿ ಭಟ್ ಉತ್ತಮ ಅಭಿನಯದೊಂದಿಗೆ ಹಾಡಿಗೆ ಸಖತ್ ಸ್ಟೆಪ್ ಕೂಡ ಹಾಕಿದ್ದಾರೆ. ದೇಶ ಮಾತ್ರವಲ್ಲದೇ ವಿದೇಶದಲ್ಲೂ ಸಿನಿಮಾ ಬಿಡುಗಡೆಗೊಳ್ಳಲಿದೆ. ಕುಟುಂಬ ಸಮೇತ ನೋಡಬೇಕಾದ ಸಿನಿಮಾ ಇದಾಗಿದೆ. ಪ್ರತಿಯೊಬ್ಬ ಮಹಿಳೆಯರ ಜೀವನದಲ್ಲಿ ನಡೆಯುವಂತಹ ಕಥೆಯನ್ನು ಈ ಸಿನಿಮಾ ಹೊಂದಿದೆ ಅಂತಾರೆ ಚಿತ್ರತಂಡದವರು.
ಸಾಮಾನ್ಯವಾಗಿ ಸೀರೆ ಅಂದರೆ ಹೆಣ್ಣು ಮಕ್ಕಳಿಗೆ ಬಹಳ ಇಷ್ಟ. ಅದರಲ್ಲೂ ಸೀರೆ ಎಷ್ಟು ಚೆನ್ನಾಗಿರುತ್ತೋ, ಅಷ್ಟೇ ಸುಂದರವಾಗಿ ಬ್ಲೌಸ್ ಇರಬೇಕು. ಸಾವಿರಾರು ರೂಪಾಯಿ ಖರ್ಚು ಮಾಡಿ ರವಿಕೆ ಹೊಲಿಸುತ್ತಾರೆ. ಒಂದು ಸಮಾರಂಭಕ್ಕೆ ಇಂಥಹದ್ದೇ ಸೀರೆ ಹೀಗೆ ಇರಬೇಕು ಅಂತಾ ಆಸೆಯಿಂದ ಒಳ್ಳೆ ಟೇಲರ್ ಬಳಿ ರವಿಕೆ ಹೊಲಿಸುತ್ತಾರೆ. ಆದರೆ, ಪ್ರತಿ ಬಾರಿ ಆ ರವಿಕೆ ಪರ್ಫೆಕ್ಟ್ ಆಗಿ ಇರುವುದಿಲ್ಲ. ಏನೋ ಒಂದು ಸರಿಯಾಗಿರೋದಿಲ್ಲ. ಇಂಥಹದ್ದೇ ಸರಿಹೊಂದದ ರವಿಕೆಯ ರಗಳೆಯ ಕಾಮಿಡಿ ಕಥೆಯೇ 'ರವಿಕೆ ಪ್ರಸಂಗ'. ಚಿತ್ರದಲ್ಲಿ ಒಂದು ರವಿಕೆಯಿಂದ ನಾಯಕಿಯ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಎನ್ನುವುದನ್ನು ಹೇಳಲಾಗಿದೆ. ಸಿನಿಮಾದಲ್ಲಿ ಮಂಗಳೂರು ಕನ್ನಡವನ್ನು ಹೆಚ್ಚು ಬಳಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿದೆ. ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಬಹಳ ಕುತೂಹಲವಿದೆ.
ಇದನ್ನೂ ಓದಿ:'I am alive': ನಾನು ಜೀವಂತವಾಗಿದ್ದೇನೆಂದು ಹೇಳಿಕೊಂಡ ನಟಿ ಪೂನಂ ಪಾಂಡೆ
ದೃಷ್ಟಿ ಮೀಡಿಯಾ ಪ್ರೊಡಕ್ಷನ್ ಅಡಿ ನಿರ್ಮಾಣಗೊಂಡಿರುವ ಈ ಚಿತ್ರಕ್ಕೆ, ಸಂತೋಷ್ ಕೊಡೆಂಕೇರಿ ಅವರ ನಿರ್ದೇಶನವಿದೆ. ಪಾವನಾ ಸಂತೋಷ್ ಕಥೆ, ಸಂಭಾಷಣೆ ಬರೆದಿದ್ದಾರೆ. ಸದ್ಯ ಸಿನಿಮಾವನ್ನು ಸೆನ್ಸಾರ್ ಮಂಡಳಿ ವೀಕ್ಷಿಸಿ ಯು/ಎ ಸರ್ಟಿಫಿಕೇಟ್ ನೀಡಿದೆ. ಸಿನಿಮಾ ಇದೇ ಫೆಬ್ರವರಿ 16 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.
ಇದನ್ನೂ ಓದಿ:'ಕೆರೆಬೇಟೆ'ಯ 'ಮಲೆನಾಡ ಗೊಂಬೆ' ಹಾಡಿಗೆ ಮನಸೋತ ರಿಯಲ್ ಸ್ಟಾರ್ ಉಪ್ಪಿ