ಸಾಧಿಸುವ ಛಲವಿದ್ದರೆ ಯಾವುದೂ ಅಸಾಧ್ಯವಲ್ಲ. ಅಂಗವೈಫಲ್ಯವೂ ಅಡ್ಡಿಯಾಗಲಾರದು. ವಿಶ್ವಾಸ್ ಎಂಬ ವಿಶೇಷಚೇತನ ಯುವಕನೊಬ್ಬ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಕಥೆಯನ್ನು ನಿರ್ದೇಶಕ ರಾಜ್‌ಕುಮಾರ್ ಅವರು 'ಅರಬ್ಬೀ' ಶೀರ್ಷಿಕೆಯ ಚಿತ್ರದ ಮೂಲಕ ಹೇಳಲೊರಟಿದ್ದಾರೆ. ಟೀಸರ್ನಿಂದಲೇ ಸ್ಯಾಂಡಲ್ವುಡ್ನಲ್ಲಿ ಗಮನ ಸೆಳೆದಿದ್ದ ಅರಬ್ಬೀ ಚಿತ್ರದ ಟ್ರೇಲರ್ ಅನಾವರಣಗೊಂಡಿದೆ.
ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ ಸುರೇಶ್, ಉಪಾಧ್ಯಕ್ಷ ವೆಂಕಟೇಶ್, ಯಶವಂತಪುರ ಸರ್ಕಲ್ ಇನ್ಸ್ಪೆಕ್ಟರ್ ಅಜಯ್ ಸಾರಥಿ, ನಾಗೇಂದ್ರ ಅರಸ್, ವಿಜಯ್ ಚೆಂಡೂರ್ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ 'ಅರಬ್ಬೀ' ಸಿಸಿಮಾದ ಟ್ರೇಲರ್ ಅನಾವರಣಗೊಂಡಿದ್ದು, ಪ್ರೇಕ್ಷಕರು ಸಿನಿಮಾ ವೀಕ್ಷಿಸುವ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಸಾಧಕ ವಿಶ್ವಾಸ್ ಅವರೇ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
ಕಿರಿ ವಯಸ್ಸಿನಲ್ಲಿ ತಂದೆ ತಾಯಿ ಜೊತೆಗೆ ತನ್ನೆರಡೂ ಕೈಗಳನ್ನು ಕಳೆದುಕೊಳ್ಳುವ ವಿಶ್ವಾಸ್, ಸಮಾಜದಲ್ಲಿ ಸಾಕಷ್ಟು ಅವಮಾನಕ್ಕೊಳಗಾಗುತ್ತಾನೆ. ನಂತರ ತನ್ನನ್ನು ಅವಮಾನಿಸಿದವರ ಎದುರೇ ಸಾಧಿಸಿ ತೋರಿಸಬೇಕು ಎಂದು ನಿರ್ಧರಿಸಿ, ಹಠ, ಆತ್ಮವಿಶ್ವಾಸದಿಂದಲೇ ಗೆಲುವು ಸಾಧಿಸುತ್ತಾನೆ. ಸ್ವಿಮ್ಮಿಂಗ್ ಕೋಚ್ ಆಗಿ ನಾಯಕ ನಟನಿಗೆ (ವಿಶ್ವಾಸ್) ಸ್ಫೂರ್ತಿ ತುಂಬುವ ವಿಶೇಷ ಪಾತ್ರದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ನಟಿಸಿದ್ದಾರೆ. ನಾಯಕನ ಗೆಳತಿಯೂ ಆತನಿಗೆ ಬೆನ್ನೆಲುಬಾಗಿ ನಿಲ್ಲುತ್ತಾಳೆ. ವಿಶ್ವಾಸ್ ಕೊನೆಗೂ ಅಂದುಕೊಂಡಿದ್ದನ್ನು ಸಾಧಿಸಿ ತೋರಿಸುತ್ತಾನೋ ಇಲ್ಲವೋ ಎಂಬುದೇ ಅರಬ್ಬೀ ಚಿತ್ರದ ಕಾನ್ಸೆಪ್ಟ್.
ನಿರ್ದೇಶಕ ರಾಜ್‌ಕುಮಾರ್ ಮಾತನಾಡಿ, ಕಳೆದ 18 ವರ್ಷಗಳಿಂದ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಕಾರ್ಯಕ್ರಮವೊಂದರಲ್ಲಿ ವಿಶ್ವಾಸ್ ಅವರನ್ನು ನೋಡಿ, ಅವರ ಬಗ್ಗೆ ಒಂದು ಸಿನಿಮಾ ಮಾಡಬಾರದೇಕೆ? ಎಂದನಿಸಿತು. ವಿಶ್ವಾಸ್ ಅವರನ್ನು ಒಪ್ಪಿಸಿ, ನಂತರ ಕೋಚ್ ಪಾತ್ರಕ್ಕೆ ಅಣ್ಣಾಮಲೈ ಅವರನ್ನು ಕರೆತಂದೆವ. ಅವರು ಯಾವುದೇ ಸಂಭಾವನೆ ಪಡೆಯದೇ ಅಭಿನಯಿಸಿದರು. ಚಿತ್ರವೀಗ ಬಿಡುಗಡೆಗೆ ಸಿದ್ಧವಾಗಿದೆ ಎಂದು ಮಾಹಿತಿ ಹಂಚಿಕೊಂಡರು.