ಕರ್ನಾಟಕ

karnataka

ETV Bharat / entertainment

ದೂರದರ್ಶನದಲ್ಲಿ ಶ್ಯಾಮ್‌ ಬೆನೆಗಲ್‌ರ 'ಮಂಥನ್' ಪ್ರಸಾರ; 5 ಲಕ್ಷ ರೈತರ ದೇಣಿಗೆಯಿಂದ ನಿರ್ಮಾಣವಾಗಿತ್ತು ಈ ಸಿನಿಮಾ! - SHYAM BENEGAL

ಭಾರತೀಯ ಚಿತ್ರರಂಗದಲ್ಲಿ ಸಮಾನಾಂತರ ಸಿನಿಮಾ ಚಳವಳಿಯ ಪ್ರವರ್ತಕ ಶ್ಯಾಮ್ ಬೆನೆಗಲ್ ನಿರ್ಮಾಣದ ಮಂಥನ್ ಚಲನಚಿತ್ರ ದೂರದರ್ಶನದಲ್ಲಿ ಪ್ರಸಾರವಾಗಲಿದೆ.

ಶ್ಯಾಮ್ ಬೆನೆಗಲ್
ಶ್ಯಾಮ್ ಬೆನೆಗಲ್ (IANS)

By PTI

Published : Dec 31, 2024, 3:55 PM IST

ನವದೆಹಲಿ: ಇತ್ತೀಚೆಗೆ ನಿಧನರಾದ ದೇಶದ ಹಿರಿಯ ಚಲನಚಿತ್ರ ನಿರ್ಮಾಪಕ ಶ್ಯಾಮ್ ಬೆನೆಗಲ್ ಅವರ ಗೌರವಾರ್ಥ ಅವರು ನಿರ್ಮಿಸಿದ್ದ 'ಮಂಥನ್' ಚಲನಚಿತ್ರವನ್ನು ಸರ್ಕಾರಿ ಸ್ವಾಮ್ಯದ ವಾಹಿನಿ ದೂರದರ್ಶನ ಪ್ರಸಾರ ಮಾಡಲಿದೆ.

1970 ಮತ್ತು 1980ರ ದಶಕದಲ್ಲಿ ಭಾರತೀಯ ಚಿತ್ರರಂಗದಲ್ಲಿ ಸಮಾನಾಂತರ ಸಿನಿಮಾ ಚಳವಳಿಯ ಪ್ರವರ್ತಕರಾಗಿದ್ದ ಬೆನೆಗಲ್ ಅವರು ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಯಿಂದ ಡಿಸೆಂಬರ್ 23ರಂದು ದೆಹಲಿಯ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.

ಬುಧವಾರ ರಾತ್ರಿ 8 ಗಂಟೆಗೆ ಪ್ರಸಾರ: ಈ ವರ್ಷದ ಆರಂಭದಲ್ಲಿ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ಕ್ಯಾನೆಸ್ ಕ್ಲಾಸಿಕ್ ವಿಭಾಗದಲ್ಲಿ ಪ್ರದರ್ಶಿಸುವುದಕ್ಕಾಗಿ 1976ರ ಕ್ಲಾಸಿಕ್ ಚಲನಚಿತ್ರವಾದ ಮಂಥನ್ ಅನ್ನು 4ಕೆ ಆವೃತ್ತಿಗೆ ರಿಸ್ಟೋರ್ ಮಾಡಿರುವ ಫಿಲ್ಮ್ ಹೆರಿಟೇಜ್ ಫೌಂಡೇಶನ್ (ಎಫ್ಎಚ್ಎಫ್) ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್​ ಮಾಡಿದೆ. ಎಫ್ಎಚ್ಎಫ್ ಪ್ರಕಾರ, 4ಕೆಯಲ್ಲಿ ಮರು ತಯಾರಿಸಲಾದ 'ಮಂಥನ್' ಬುಧವಾರ ರಾತ್ರಿ 8 ಗಂಟೆಗೆ ದೂರದರ್ಶನದಲ್ಲಿ ಪ್ರಸಾರವಾಗಲಿದೆ.

"ದಿವಂಗತ ಶ್ಯಾಮ್ ಬೆನಗಲ್ ಅವರಿಗೆ ಗೌರವ ಸಲ್ಲಿಸಲು, ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ ಲಿಮಿಟೆಡ್ (ಅಮುಲ್) ಬೆಂಬಲದೊಂದಿಗೆ ಎಫ್ಎಚ್ಎಫ್ ಪುನಃಸ್ಥಾಪಿಸಿದ 'ಮಂಥನ್' (1976) ಪ್ರದರ್ಶನದೊಂದಿಗೆ ದೂರದರ್ಶನವು ಹೊಸ ವರ್ಷವನ್ನು ಪ್ರಾರಂಭಿಸಲಿದೆ" ಎಂದು ಫೌಂಡೇಶನ್ ತಿಳಿಸಿದೆ.

5 ಲಕ್ಷ ರೈತರಿಂದ ತಲಾ 2 ರೂಪಾಯಿ ದೇಣಿಗೆ: ವಿಶ್ವದ ಅತಿದೊಡ್ಡ ಹಾಲು ಉತ್ಪಾದಕನಾಗಲು ಕಾರಣವಾದ ವರ್ಗೀಸ್ ಕುರಿಯನ್ ಅವರ ಪ್ರಖ್ಯಾತ ಹಾಲು ಸಹಕಾರ ಚಳವಳಿಯ ಸ್ಫೂರ್ತಿಯಿಂದ 'ಮಂಥನ್' ಚಿತ್ರವನ್ನು ತಯಾರಿಸಲಾಗಿದೆ. ಈ ಚಿತ್ರ ನಿರ್ಮಾಣಕ್ಕೆ 48 ವರ್ಷಗಳ ಹಿಂದೆ ಗುಜರಾತ್​ನ 5 ಲಕ್ಷ ರೈತರು ತಲಾ 2 ರೂಪಾಯಿ ದೇಣಿಗೆ ನೀಡಿದ್ದರು. ಅದೇ ಕಾರಣದಿಂದ ಚಿತ್ರ ಆರಂಭವಾಗುವಾಗ ಟೈಟಲ್ ಕಾರ್ಡ್​ನಲ್ಲಿ "ಗುಜರಾತ್‌ನ 5,00,000 ರೈತರು ಅರ್ಪಿಸುವ" ಎಂಬ ಸಾಲು ಕಾಣಿಸುತ್ತದೆ.

ಸಿನಿಮಾದಲ್ಲಿ ದಿಗ್ಗಜರ ಅಭಿನಯ: ಗ್ರಾಮೀಣ ರೈತರ ಸಬಲೀಕರಣಕ್ಕಾಗಿ ಹಾಲು ಸಹಕಾರಿ ಸಂಘ ಸ್ಥಾಪಿಸುವಾಗ ದಬ್ಬಾಳಿಕೆಯ ಶಕ್ತಿಗಳ ವಿರುದ್ಧ ಯುವ ಪಶುವೈದ್ಯ (ಗಿರೀಶ್ ಕಾರ್ನಾಡ್)ನೊಬ್ಬ ಹೇಗೆ ಹೋರಾಡುತ್ತಾನೆ ಎಂಬ ಕಥೆಯನ್ನು 'ಮಂಥನ' ಹೇಳುತ್ತದೆ. ಇದರಲ್ಲಿ ಸ್ಮಿತಾ ಪಾಟೀಲ್, ನಾಸಿರುದ್ದೀನ್ ಶಾ ಮತ್ತು ಅಮರೀಶ್ ಪುರಿ ಕೂಡ ನಟಿಸಿದ್ದಾರೆ.

ಇದನ್ನೂ ಓದಿ : ವಾರದೊಳಗೆ 30 ಕೋಟಿ ದಾಟಿತು ಕಿಚ್ಚನ 'ಮ್ಯಾಕ್ಸ್': ಸುದೀಪ್​​ ಮ್ಯಾಕ್ಸಿಮಮ್ ಅಬ್ಬರಕ್ಕೆ ಫ್ಯಾನ್ಸ್​​ ಫಿದಾ - MAX COLLECTION

ABOUT THE AUTHOR

...view details