ಮೈಸೂರು : ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ರಾಜ್ಯ ಸರ್ಕಾರ ನೆಪ ಹುಡುಕುತ್ತಿದೆ ಎಂದು ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ ಆರೋಪಿಸಿದರು.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರಿ ಬಸ್ ಪ್ರಯಾಣ ದರವನ್ನು ಒಮ್ಮೆಲೇ ಶೇ.15ರಷ್ಟು ಏರಿಕೆ ಮಾಡಿರುವ ಬಗ್ಗೆಯೂ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ನಿಲ್ಲಿಸಲು ಕಾರಣವನ್ನು ಹುಡುಕುತ್ತಿದೆ. ಹೇಗಾದರೂ ಮಾಡಿ ಗ್ಯಾರಂಟಿ ನಿಲ್ಲಿಸಲು ನೆಪ ಹುಡುಕುತ್ತಿದೆ ಎಂದು ದೂರಿದರು.
ಯಾವುದೇ ಕಾರಣಕ್ಕೂ 5 ಗ್ಯಾರಂಟಿಗಳನ್ನು ನಿಲ್ಲಿಸಬೇಡಿ. ಸಾಕಷ್ಟು ಜನರಿಗೆ ಇದರಿಂದ ಅನುಕೂಲ ಆಗಿದೆ ಎಂದು ನೀವೇ ಹೇಳುತ್ತಿದ್ದೀರಿ. ಹಾಗಿದ್ದ ಮೇಲೆ ಮತ ಕೊಟ್ಟು ಅಧಿಕಾರ ನೀಡಿದ ಜನರಿಂದ ಅವುಗಳನ್ನು ಕಿತ್ತುಕೊಳ್ಳುವ ಕೆಲಸವನ್ನು ಸರ್ಕಾರ ಮಾಡಬಾರದು. ಮಧ್ಯಮ ವರ್ಗದ ಜನರ ಬದುಕಿನ ಜತೆ ರಾಜ್ಯ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ಅತ್ತೆಯದನ್ನು ಅಳಿಯ ದಾನ ಮಾಡಿದ ಎನ್ನುವ ಮಾತಿನಂತೆ ಅವರಿಂದ ಕಿತ್ತು ಅವರಿಗೆ ಕೊಡುವುದಕ್ಕೆ ಇವರೇ ಆಗಬೇಕಾ?. ಬಸ್ ಪ್ರಯಾಣ ದರ ಏರಿಕೆಯಿಂದ ಜನಸಾಮಾನ್ಯರಿಗೆ ಹೊರೆಯಾಗಲಿದೆ. ಯಾವುದೇ ಮಂತ್ರಿಯ ಮಕ್ಕಳು, ಶಾಸಕರ ಮಕ್ಕಳು ಸರ್ಕಾರಿ ಬಸ್ನಲ್ಲಿ ಓಡಾಡುವುದಿಲ್ಲ. ಓಡಾಡುವವರೆಲ್ಲಾ ಜನ ಸಾಮಾನ್ಯರು. ದಿನಕ್ಕೆ 10 ರೂಪಾಯಿ ಹೆಚ್ಚಿಗೆಯಾದರೂ ಅದು ಅವರಿಗೆ ಹೊರೆಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬಸ್ ದರ ಪ್ರಶ್ನಿಸಿದರೆ ಮಾಂಸ ತಿನ್ನುವುದಿಲ್ಲವಾ? ಎಂದು ಹಾರಿಕೆಯ ಮಾತನಾಡುತ್ತಾರೆ ಸಚಿವರು. ಬಡವರು ಮಾಂಸ ತಿನ್ನುವುದರ ಮೇಲೆ ಏಕೆ ಇವರಿಗೇಕೆ ಕಣ್ಣು? ಬಡ ಮಧ್ಯಮ ವರ್ಗದವರು ವಾರಕ್ಕೆ ಒಮ್ಮೆ ಮಾಂಸ ಖರೀದಿ ಮಾಡಲು ಎಷ್ಟು ಕಷ್ಟಪಡುತ್ತಾರೆ ಗೊತ್ತಾ ಇವರಿಗೆ? ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅಷ್ಟು ಪರಿಜ್ಞಾನ ಬೇಡವೇ ಇವರಿಗೆ ಎಂದು ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಮನೆ ಹಂಚಿಕೆಯಲ್ಲಿಯೂ ಲಂಚ ಪಡೆಯಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿರುವ ಹೆಚ್ಡಿಕೆ, ಲಂಚದ ಪ್ರಮಾಣ ಶೇ. 60 ತಲುಪಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಶೇ.60 ರಷ್ಟು ಲಂಚ, ಕಮಿಷನ್ ವಸೂಲಿ ಮಾಡುತ್ತಿರುವುದನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಒಪ್ಪಿಕೊಂಡಿದ್ದಾರೆ ಎಂದರು.
ಬಡವರಿಗೆ ಮನೆ ಹಂಚಿಕೆಯಲ್ಲೂ ಲಂಚ ಹೊಡೆಯಲಾಗುತ್ತಿದೆ. ಮೊದಲು ಪಿಡಿಒ ಲಂಚ ಪಡೆಯುತ್ತಿದ್ದರು. ಈಗ ವಿಧಾನಸೌಧದಲ್ಲಿ ಸಚಿವರೇ ರಾಜಾರೋಷವಾಗಿ ಲಂಚ ಪಡೆಯುತ್ತಿದ್ದಾರೆ. ಸತ್ಯಮೇವ ಜಯತೇ ಎಂದರೆ ಇದೆನಾ? ಇವರ ಸತ್ಯಮೇವ ಜಯತೆ ಬರೀ ಜಾಹೀರಾತಿಗೆ ಸೀಮಿತವಾಗಿದೆ ಎಂದು ಕೇಂದ್ರ ಸಚಿವರು ವ್ಯಂಗ್ಯವಾಡಿದರು.
ಗಾಂಧೀಜಿ ಅವರ ಸತ್ಯಮೇವ ಜಯತೆ ಮಾತಿನಂತೆ ಸಿದ್ದರಾಮಯ್ಯ ಅವರು ನಡೆದುಕೊಳ್ಳುತ್ತಿದ್ದಾರಾ? ಅವರ ಆತ್ಮಕ್ಕೆ ಅವರೇ ಉತ್ತರ ಕೊಟ್ಟುಕೊಳ್ಳಲಿ. ಹಣ ಲೂಟಿ ಮಾಡುವುದಕ್ಕೆ ಇತಿಮಿತಿ ಇಲ್ಲವಾ? ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.
ರಾಜ್ಯದ ಗುತ್ತಿಗೆದಾರರ ಪರಿಸ್ಥಿತಿ ಶೋಚನೀಯವಾಗಿದೆ. ಇವತ್ತಿನ ಪರಿಸ್ಥಿತಿ ನೋಡಿದರೆ ಹಿಂದಿನ ಬಿಜೆಪಿ ಸರ್ಕಾರವೇ ಚೆನ್ನಾಗಿತ್ತು ಎನ್ನುತ್ತಿದ್ದಾರೆ ಕಾಂಗ್ರೆಸ್ ಪರವಾಗಿರುವ ಗುತ್ತಿಗೆದಾರರು. ಇದಕ್ಕೆಲ್ಲಾ ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷ ಬೆಲೆ ತರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ : ಬೆಲೆ ಏರಿಕೆಗೆ ವರ್ಷ ಪೂರ್ತಿ ತಯಾರಾಗಿ ಎಂದು ಸರ್ಕಾರದಿಂದ ಜನರಿಗೆ ಸಂದೇಶ: ಹೆಚ್ಡಿಕೆ - H D KUMARASWAMY